

ನವದೆಹಲಿ: ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ವಜಾ ಮಾಡಿರುವ ಉತ್ತರಾಖಂಡ್ ಹೈಕೋರ್ಟ್ ತೀರ್ಪಿನಿಂದ ಅಚ್ಚರಿಯಾಗಿಲ್ಲ ಎಂದು ಬಿಜೆಪಿ ಗುರುವಾರ ಹೇಳಿದೆ.
ಬಹುಮತ ಸಾಬೀತಿನ ದಿನವಾದ ಏಪ್ರಿಲ್ ೨೯ ರಂದು ನಾವು "ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಬಹುಮತ ಇಲ್ಲ" ಎಂದು ಸಾಬೀತು ಮಾಡಲಿದ್ದೇವೆ ಎಂದು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಕೈಲಾಶ್ ವಿಜಯವರ್ಗೀಯ ಮಾಧ್ಯಮಗಳಿಗೆ ಹೇಳಿದ್ದಾರೆ.
ಕೋರ್ಟ್ ಈ ಹಿಂದೆ ಮಾಡಿರುವ ಅವಲೋಕನವನ್ನು ಗಮನಿಸಿದಾಗ ಈ ತೀರ್ಪು ಅನಿರೀಕ್ಷಿತವೇನಲ್ಲ ಎಂದು ಅವರು ಹೇಳಿದ್ದಾರೆ. ರಹಸ್ಯ ಕ್ಯಾಮಾರಾದಲ್ಲಿ ಕುದುರೆ ವ್ಯಾಪಾರ ಮಾಡಿದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿಗೆ ಕೋರ್ಟ್ ತಾತ್ಕಾಲಿಕ ನೆಮ್ಮದಿ ನೀಡಿದೆ ಎಂದು ಕೂಡ ಬಿಜೆಪಿ ಮುಖಂಡ ಹೇಳಿದ್ದಾರೆ.
ರಾವತ್ ಅವರು ಸಲ್ಲಿಸಿದ ಅರ್ಜಿಯನ್ನು ಎರಡು ದಿನಗಳವರೆಗೆ ವಿಚಾರ ಮಾಡಿದ ಹೈಕೋರ್ಟ್ ರಾಜ್ಯದ ಮೇಲೆ ಕೇಂದ್ರ ಸರ್ಕಾರ ಹೇರಿರುವ ರಾಷ್ಟ್ರಪತಿ ಆಳ್ವಿಕೆ ತಪ್ಪೆಂದು ವಜಾ ಮಾಡಿದೆ ಮತ್ತು ಏಪ್ರಿಲ್ ೨೯ಕ್ಕೆ ಬಹುಮತ ಸಾಬೀತು ಪಡಿಸಲು ಅವಕಾಶ ನೀಡಲು ಆದೇಶಿಸಿದೆ.