

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಕಪ್ಪುಹಣ ತಡೆಯುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಕೆಲ ನಿರ್ದಿಷ್ಟ ಬ್ಯಾಂಕ್ ಗಳ ಖಾತೆಗಳ ಮೇಲಿನ ವಿತ್ ಡ್ರಾ ಮೇಲೆ ಮಿತಿ ಹೇರಿದೆ.
ಕಪ್ಪು-ಬಿಳಿ ದಂಧೆಯಲ್ಲಿ ಕೆಲ ಖಾಸಗಿ ಬ್ಯಾಂಕ್ ಗಳ ಅಧಿಕಾರಿಗಳು ಸಿಕ್ಕಿಬೀಳುತ್ತಿರುವ ಬೆನ್ನಲ್ಲೇ ಮತ್ತಷ್ಟು ಕಠಿಣ ಕ್ರಮ ಜರುಗಿಸಲು ಆರ್ ಬಿಐ ಮುಂದಾಗಿದ್ದು, ಸಂಶಯಾಸ್ಪದ ವ್ಯವಹಾರ ನಡೆಸಿರುವ ಬ್ಯಾಂಕ್ ಗಳ ಖಾತೆಗಳ ಮೇಲಿನ ವಿತ್ ಡ್ರಾ ಮಿತಿಯನ್ನು ತಿಂಗಳಿಗೆ 10 ಸಾವಿರ ರುಗಳಿಗೆ ಕಡಿತಗೊಳಿಸಿದೆ. ಆರ್ ಬಿಐ ಮೂಲಗಳ ಪ್ರಕಾರ ನವೆಂಬರ್ 8ರ ನೋಟು ನಿಷೇಧ ಬಳಿಕ ಜನ್ ಧನ್ ಖಾತೆ ಮತ್ತು ಎಸ್ ಬಿ ಖಾತೆಗಳಲ್ಲಿ 2 ಲಕ್ಷಕ್ಕೂ ಅಧಿಕ ಹಣ ಠೇವಣಿ ಮಾಡಿರುವ ಖಾತೆಗಳ ತಿಂಗಳ ವಿತ್ ಡ್ರಾ ಮಿತಿಯನ್ನು ಕೇವಲ 10 ಸಾವಿರಕ್ಕೆ ಮಿತಿಗೊಳಿಸಿದೆ ಎಂದು ತಿಳಿದುಬಂದಿದೆ.
ಅಂತೆಯೇ ನವೆಂಬರ್ 9ರ ಬಳಿಕ ಯಾವ ಖಾತೆಯಲ್ಲಿ 5ಲಕ್ಷಕ್ಕೂ ಅಧಿಕ ಠೇವಣಿ ಇದೆಯೊ ಅಂತಹ ಖಾತೆಗಳನ್ನು ಪರೀಕ್ಷಣೆಯಲ್ಲಿಡುವಂತೆ ಆರ್ ಬಿಐ ಬ್ಯಾಂಕುಗಳಿಗೆ ಸೂಚಿಸಿದೆ. ಒಂದು ವೇಳೆ ಖಾತೆದಾರನ ಬಳಿ ಪ್ಯಾನ್ ಸಂಖ್ಯೆ ಇಲ್ಲದೇ ಹೋದರೆ ಅಥವಾ ಫಾರ್ಮ್ 60 ಸಲ್ಲಿಸದೇ ಇರುವ ಖಾತೆದಾರರಿಗೆ ವಿತ್ ಡ್ರಾ ಅಥವಾ ಹಣ ವರ್ಗಾವಣೆಗೆ ಅನುಮತಿ ನೀಡದಂತೆಯೂ ಮತ್ತು ಬಹುತೇಕ ಬ್ಯಾಂಕ್ ಗಳಲ್ಲಿ ಕೆವೈಸಿ(ನಿಮ್ಮ ಗ್ರಾಹಕರ ತಿಳಿಯಿರಿ)ಯೇ ಆಗದ ಖಾತೆಗಳನ್ನು ಗುರುತಿಸಲಾಗಿದ್ದು, ಈ ಖಾತೆಗಳು ಕೂಡಲೇ ಕೆವೈಸಿ ಮಾಡಿಸುವಂತೆ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಆರ್ ಬಿಐ ನೀಡಿರುವ ಸೂಚನೆಯಂತೆ ಬ್ಯಾಂಕುಗಳು ನವೆಂಬರ್ 8 ರಬಳಿಕ ಖಾತೆಯಲ್ಲಿ 5 ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚು ಠೇವಣಿ ಹೊಂದಿರುವ ಖಾತೆಗಳಿಂದ ಹಣ ವರ್ಗಾವಣೆ ಅಥವಾ ವಿತ್ ಡ್ರಾಗೆ ಪ್ಯಾನ್ ಸಂಖ್ಯೆ ಅಥವಾ ಫಾರ್ಮ್ 60 ಅನ್ನು ಕಡ್ಡಾಯವಾಗಿ ಸಲ್ಲಿಸಬೇಕಿದೆ.