"ಅಪಘಾತ ರಾಜಧಾನಿ" ಎಂಬ ಕುಖ್ಯಾತಿಯಿಂದ ಭಾರತವನ್ನು ಪಾರುಮಾಡಬಹುದು: ಸುಪ್ರೀಂ ಕೋರ್ಟ್

ನವದೆಹಲಿ: ವಿಶ್ವದ ಅಪಘಾತ ರಾಜಧಾನಿ ಎಂಬ ಕುಖ್ಯಾತಿಯಿಂದ ಭಾರತವನ್ನು ಪಾರು ಮಾಡಬಹುದು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಹೆದ್ದಾರಿಗಳಲ್ಲಿ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸುವ ಕುರಿತು ಸಾಮಾಜಿಕ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ಹಿಂದೆ ಹೆದ್ದಾರಿಗಳಲ್ಲಿ ಮದ್ಯಮಾರಾಟ ಮಾಡುವಂತಿಲ್ಲ ಎಂದು ಹೇಳಿತ್ತು. ಅಲ್ಲದೆ ಹೆದ್ದಾರಿಗಳಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಿಸುವಂತೆ ಮಹತ್ವದ ಆದೇಶ ನೀಡಿತ್ತು. ಆ ಪ್ರಕರಣ ಮುಂದುವರೆದ ಭಾಗವೆಂಬಂತೆ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ದತ್ತಾಂಶಗಳನ್ನು ನೀಡಿದ್ದು, ಈ ದತ್ತಾಂಶಗಳ ಪ್ರಕಾರ 2014ರ ಒಂದೇ ವರ್ಷದಲ್ಲಿ ದೇಶಾದ್ಯಂತ 2.37 ಲಕ್ಷ ರಸ್ತೆ ಅಪಘಾತಗಳಾಗಿದ್ದು, ಈ ಪೈಕಿ ಸುಮಾರು 85,462 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ 2.59 ಲಕ್ಷ ಮಂದಿ ಗಾಯಗೊಂಡಿದ್ದಾರೆ.
ಅಂತೆಯೇ 2009ರಲ್ಲೂ ಅತೀ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂಬ ಅಂಶ ನ್ಯಾಯಾಲಯದ ಗಮನಕ್ಕೆ ಬಂದಿದ್ದು, ಇದೇ ಕಾರಣಕ್ಕೆ ನ್ಯಾಯಾಲಯ ತೀವ್ರ ಕಾಳಜಿ ವ್ಯಕ್ತಪಡಿಸಿದೆ. ಈ ದತ್ತಾಂಶಗಳನ್ನು ಗಮನಿದರೆ ಭಾರತ ಭವಿಷ್ಯದಲ್ಲಿ ವಿಶ್ವದ ಅಪಘಾತ ರಾಜಧಾನಿ ಎಂಬ ಕುಖ್ಯಾತಿ ಪಡೆಯುವುದರಲ್ಲಿ ಎರಡು ಮಾತಿಲ್ಲ. ಆದರೆ ಇತಂಹದೊಂದು ಮುಖಭಂಗದಿಂದ ಪಾರಾಗಲು ಭಾರತಕ್ಕೆ ಇನ್ನೂ ಅವಕಾಶವಿದೆ. ರಸ್ತೆ ಸಾರಿಗೆ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿ, ಕಾನೂನಿನ ಸಮರ್ಪಕ ನಿರ್ವಹಣೆ ಮತ್ತು ಹೆದ್ದಾರಿಗಳಲ್ಲಿ ಮದ್ಯದಂಗಡಿಗಳನ್ನು ನಿಗ್ರಹಿಸುವ ಮೂಲಕ ಅಪಘಾತ ರಾಜಧಾನಿ ಎಂಬ ಕುಖ್ಯಾತಿಯಿಂದ ಭಾರತವನ್ನು ಪಾರು ಮಾಡಬಹುದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
"ಭಾರತದಂತಹ ರಾಷ್ಟ್ರದಲ್ಲಿ ಕಾನೂನು ಸರಿಯಾದ ರೀತಿಯಲ್ಲಿ ಜಾರಿಯಾಗಬೇಕಾದ ಅನಿವಾರ್ಯತೆ ಇದೆ. ಮಾನವ ಜೀವ ಅಮೂಲ್ಯವಾದದ್ದು, ರಸ್ತೆ ಸುರಕ್ಷತೆ ಮತ್ತು ರಸ್ತೆ ಅಭಿವೃದ್ಧಿ ಕೂಡ ದೇಶದ ಮೂಲಭೂತ ಸೌಕರ್ಯಗಳಲ್ಲಿ ಒಂದು. ಅಪಘಾತದಂತಹ ದುರಂತಗಳು ಜನ ಸಾಮಾನ್ಯರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕ್ರಮೇಣ ಇದು ದೇಶದ ಆರ್ಥಿಕತೆಯ ಮೇಲು ಪರಿಣಾಮ ಬೀರುತ್ತದೆ. ಹೀಗಾಗಿ ಭಾರತವನ್ನು ಅಪಘಾತ ರಾಜಧಾನಿ ಎಂಬ ಕುಖ್ಯಾತಿಯಿಂದ ಪಾರು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಡಿಸೆಂಬರ್ 15ರಂದು ನಡೆದ ವಿಚಾರಣೆಯಲ್ಲಿ ದೇಶದ ಎಲ್ಲ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿತ್ತು. ಅಂತೆಯೇ ಪ್ರಸ್ತುತ ಇರುವ ಮದ್ಯದಂಗಡಿಗಳನ್ನು ತೆರವುಗೊಳಿಸಿ ಹೆದ್ದಾರಿಗಳಿಂದ ಕನಿಷ್ಛ 500 ಮೀಟರ್ ದೂರದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಆದೇಶ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


