ತೀವ್ರ ಟೀಕಾಕಾರರಿಗೆ ರಕ್ಷಣಾ ಸಚಿವರ ನೂತನ ಸಲಹೆ: ನಗ್ನರಾಗಿ ನೃತ್ಯ ಮಾಡಿ!
ಗೋವಾ ಮಾಧ್ಯಮದ ಒಂದು ಬಣವನ್ನು ತೀವ್ರವಾಗಿ ಟೀಕಿಸಿರುವ ರಕ್ಷಣಾ ಸಚಿವ ಮನೋಹರ್ ಪರ್ರಿಕರ್, ಕೆಲಸವಿಲ್ಲದೆ ಟೀಕಿಸುವವರು ಪ್ರಚಾರಕ್ಕಾಗಿ ಬಟ್ಟೆ ಕಳಚಿ ಕುಣಿಯಿರಿ ಎಂಬ ಸಲಹೆ ನೀಡಿದ್ದಾರೆ.
ಪಣಜಿ: ಗೋವಾ ಮಾಧ್ಯಮದ ಒಂದು ಬಣವನ್ನು ತೀವ್ರವಾಗಿ ಟೀಕಿಸಿರುವ ರಕ್ಷಣಾ ಸಚಿವ ಮನೋಹರ್ ಪರ್ರಿಕರ್, ಕೆಲಸವಿಲ್ಲದೆ ಟೀಕಿಸುವವರು ಪ್ರಚಾರಕ್ಕಾಗಿ ಬಟ್ಟೆ ಕಳಚಿ ಕುಣಿಯಿರಿ ಎಂಬ ಸಲಹೆ ನೀಡಿದ್ದಾರೆ.
ಪಣಜಿಯಿಂದ ೪೦ ಕಿಲೋಮೀಟರ್ ದೂರದಲ್ಲಿರುವ ಸತ್ತರಿ ಉಪಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಟೀಕೆಯ ಮಿತಿಗಳ ಬಗ್ಗೆ ಸೋಮವಾರ ಪರ್ರಿಕರ್ ಮಾತನಾಡಿದ್ದಾರೆ.
"೧೯೬೮ ರ ವಾಟರ್ ಗೇಟ್ ಪ್ರಕರಣದಲ್ಲಿ, ಅವರು (ಸಂಪಾದಕ) ನಿಕ್ಸನ್ (ರಿಚರ್ಡ್) ಅವರಿಗೆ ಸಲಹೆ ನೀಡಿ ದೀರ್ಘ ಸಂಪಾದಕೀಯ ಬರೆದದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ಈಗ, ಅವರು ಮರಾಠಿಯಲ್ಲಿ ಬರೆದ ಸಂಪಾದಕೀಯ ನಿಕ್ಸನ್ ತಲುಪುವುದು ಹೇಗೆ? ಅವರು ಅಮೆರಿಕಾದಲ್ಲಿದ್ದಾರೆ.
"ಕೆಲವು ಜನ ತಮ್ಮ ಮಿತಿಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಏನೇನೋ ಬಡಬಡಾಯಿಸುತ್ತಿರುತ್ತಾರೆ. ಅವರಿಗೆ ನನ್ನಿಂದ ಒಳ್ಳೆಯ ಸಲಹೆ ಇದೆ. ನಿಮ್ಮ ಬಟ್ಟೆಗಳನ್ನು ಕಳಚಿ ನಗ್ನವಾಗಿ ಕುಣಿಯಿರಿ.
"ಆಗ ಇನ್ನು ಒಳ್ಳೆಯ ಪ್ರಚಾರ ಸಿಗುತ್ತದೆ" ಎಂದು ಪ್ರಾದೇಶಿಕ ಪತ್ರಿಕೆಯ ಸಂಪಾದಕರನ್ನೊಬ್ಬರನ್ನು ಕುರಿತು ಹೇಳಿದ್ದಾರೆ.
"ಪ್ರಚಾರಕ್ಕೋಸ್ಕರ ಅವಹೇಳನ ಮಾಡುವವರಿಗೆ ನಾನು ಒಂದು ಸಲಹೆ ನೀಡುತ್ತೇನೆ. ಇಲ್ಲಿ ದಿನಪತ್ರಿಕೆಯೊಂದಿತ್ತು. ಅದು ಇನ್ನು ಇದೆ. ನಾನು ಅದರ ಹೆಸರು ತೆಗೆದುಕೊಳ್ಳುವುದಿಲ್ಲ. ಅದಕ್ಕೆ ಒಬ್ಬ ಸಂಪಾದಕ ಕೂಡ ಇದ್ದಾರೆ.
"ಅವರು ಅಂತಾರಾಷ್ಟ್ರೀಯ ಖ್ಯಾತಿಯ ಸಂಪಾದಕ, ಅವರನ್ನು ಇಳಿ ವಯಸ್ಸಿನಲ್ಲಿ ಇಲ್ಲಿಗೆ ಕರೆತರಲಾಯಿತು. ಅವರ ದಿನಪತ್ರಿಕೆ ಮಾರಾಟ ೧೦೦೦.. ದಲ್ಲಿತ್ತು" ಎಂದು ಕೂಡ ಮಾಜಿ ಗೋವಾ ಮುಖ್ಯಮಂತ್ರಿ ತಾಳ್ಮೆ ಕಳೆದುಕೊಂಡು ಕಿಡಿಕಾರಿದ್ದಾರೆ.