

ಇಂದೋರ್: ಜೆ ಎನ್ ಯು ವಿವಾದ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಇಂದೋರ್ ನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಮೇಲೆ ಕಾಂಗ್ರೆಸ್ ಪಕ್ಷದ ಮುಖಂಡರು ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಆರ್ ಎಸ್ ಎಸ್ ಗೆ ನಿಜವಾದ ದೇಶಪ್ರೇಮವಿಲ್ಲ ಬರೀ ಬಾಯಿಮಾತು, ತನ್ನ ಕಚೇರಿಯಲ್ಲಿಯೇ ರಾಷ್ಟ್ರಧ್ವಜ ಹಾರಿಸಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ಈ ಕ್ರಮಕ್ಕೆ ಮುಂದಾಗಿದೆ.
ಈ ಸಂದರ್ಭದಲ್ಲಿ ಉದ್ವಿಗ್ನತೆ ಏರ್ಪಡುವುದೆಂದು ಎಣಿಸಿ ಪೊಲೀಸರು ಭಿಗಿ ಭದ್ರತೆ ಒದಗಿಸಿದ್ದರೂ, ಈ ಕ್ರಮವನ್ನು ಸ್ವಾಗತಿಸಿದ ಆರ್ ಎಸ್ ಎಸ್ ಕಾರ್ಯಕರ್ತರು ಕಾಂಗ್ರೆಸ್ ಮುಖಂಡರನ್ನು ಸ್ವಾಗತಿಸಿ ರಾಜಕೀಯಕ್ಕಿಂತಲೂ ನಮಗೆ ರಾಷ್ಟ್ರಧ್ವಜ ಮುಖ್ಯ ಎಂದಿದ್ದಾರೆ.
ಬೆಳಗ್ಗೆ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅರುಣ್ ಯಾದವ್ ಅವರ ಮುಂದಾಳತ್ವದಲ್ಲಿ ೮೦೦ ಜನ ಕಾಂಗ್ರೆಸ್ ಕಾರ್ಯಕರ್ತರು ಆರ್ ಎಸ್ ಎಸ್ ಕಚೇರಿಗೆ ತೆರಳಿದ್ದಾರೆ. ಆದರೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದು ಕಾಂಗ್ರೆಸ್ ಕಾರ್ಯಕರ್ತರು ಮುಂದೆ ಹೋಗದಂತೆ ನಿಯಂತ್ರಿಸಿದ್ದಾರೆ. ನಂತರ ಅಧಿಕಾರಿಗಳು ಯಾದವ್ ಅವರ ಜೊತೆ ೨೦ ಕಾಂಗ್ರೆಸ್ ಮುಖಂಡರನ್ನು ಆರ್ ಎಸ್ ಎಸ್ ಕಚೇರಿಗೆ ಚರ್ಚಿಸಲು ಅವಕಾಶ ನೀಡಿದ್ದರೆ. ಈ ಸಮಯದಲ್ಲಿ ಆರ್ ಎಸ್ ಎಸ್ ಮುಖಂಡರು ಕಾಂಗ್ರೆಸ್ ಪಕ್ಷದವರನ್ನು ಸ್ವಾಗತಿಸಿದ್ದಲ್ಲದೆ ಅವರಿಗೆ ತಿಂಡಿಯ ಉಪಚಾರವನ್ನು ಮಾಡಿದ್ದಾರೆ.
ನಂತರ ಯಾದವ್ ಅವರು ಆರ್ ಎಸ್ ಎಸ್ ನ ಭಗವದ್ವಜದ ಪಕ್ಕದಲ್ಲೇ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. "ಜೆ ಎನ್ ಯು ವಿವಾದದ ನಂತರ ಪ್ರಧಾನಿ ನರೇಂದ್ರ ಮೋದಿ, ಅವರ ಸಹ ಸಚಿವರು ಮತ್ತು ಬಿಜೆಪಿ ಪಕ್ಷ ರಾಷ್ಟ್ರೀಯತೆ, ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ಆದರೆ ಆರ್ ಎಸ್ ಎಸ್ ಅವರದ್ದು ಬರೀ ಬಾಯಿಮಾತು. ಆರ್ ಎಸ್ ಎಸ್ ಕೂಡ ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ಅದಕ್ಕಾಗಿ ನಾವಿಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದೇವೆ. ಮುಂದೆ ಕೂಡ ಕೇಸರಿ ಧ್ವಜದ ಜೊತೆಗೆ ರಾಷ್ಟ್ರಧ್ವಜವೂ ಸದಾ ಹಾರಲಿದೆ ಎಂದು ನಂಬುತ್ತೇನೆ" ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಆರ್ ಎಸ್ ಎಸ್ ಪ್ರಾದೇಶಿಕ ಅಧ್ಯಕ್ಷ ದಿನೇಶ್ ಜೈನ್ "ರಾಷ್ಟ್ರದಾದ್ಯಂತ ನಾವು ರಾಷ್ಟ್ರೀಯ ಹಬ್ಬಗಳು ಮತ್ತು ರಾಷ್ಟ್ರಧ್ವಜ ಹಾರಾಟದ ಸಮಾರಂಭಗಳಲ್ಲಿ ಭಾಗವಹಿಸುತ್ತೇವೆ. ನಮಗೆ ಕೇಸರಿ ಧ್ವಜ, ಸಂಸ್ಕೃತಿಯ ಸಂಕೇತ ಮತ್ತು ಅದನ್ನು ಗುರುವಾಗಿ ಕಾಣುತ್ತೇವೆ" ಎಂದಿದ್ದಾರೆ.