

ನವದೆಹಲಿ: ಬಿಜೆಪಿ ಮುಂದಾಳತ್ವದ ಸರ್ಕಾರ ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಸುತ್ತಿದೆ ಮತ್ತು ವಿರೋಧಿ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಹೇಳಿದ್ದಾರೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಇತ್ತೀಚಿನ ಘಟನೆಗಳ ಬಗ್ಗೆ ಲೋಕಸಭೆಯ ವಾಗ್ವಾದಗಳಲ್ಲಿ ಪಾಲ್ಗೊಂಡು ಪ್ರತಿಕ್ರಿಯಿಸಿದ ಸಿಂಧಿಯಾ, ಒಂದು ಸಿದ್ಧಾಂತ ನಂಬಿದವರು ಮಾತ್ರ ಉಳಿಯಬೇಕೆಂಬ ನಂಬಿಕೆ ಸರ್ಕಾರದಲ್ಲಿದೆ ಎಂದಿದ್ದಾರೆ.
"ನಾವು ದೇಶದಲ್ಲಿ ಕಳೆದ ಎರಡು ವರ್ಷದಿಂದ ಅಸಹಿಷ್ಣು ವಾತಾವರಣ ಹೆಚ್ಚುತ್ತಿರುವುದನ್ನು ಕಂಡಿದ್ದೇವೆ. ವಿರೋಧಿ ಧ್ವನಿಯನ್ನು ಹತ್ತಿಕ್ಕಲು ಎಲ್ಲ ರೀತಿಯ ಪ್ರಯತ್ನ ನಡೆದಿದೆ" ಎಂದು ಸಿಂಧಿಯಾ ಹೇಳಿದ್ದಾರೆ.
ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ವಾಂಸ ರೋಹಿತ್ ವೇಮುಲಾ ಆತ್ಮಹತ್ಯೆಯ ಪ್ರಕರಣದಲ್ಲಿ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮತ್ತು ಮಾನವ ಸಂಪನ್ಮೂಲಗಳ ಸಚಿವೆ ಸ್ಮೃತಿ ಇರಾನಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳಬೇಕೆಂದು ಅವರು ಆಗ್ರಹಿಸಿದ್ದಾರೆ.