ಮೂರು ಕಡೆ ಸ್ಫೋಟಕ್ಕೆ ಸಂಚು

ದೆಹಲಿ ಪೊಲೀಸ್ ವಿಶೇಷ ಘಟಕ ಬುಧವಾರ ಬೆಂಗಳೂರಿನಲ್ಲಿ ಬಂಧಿಸಿದ್ದ ಮೌಲ್ವಿ ಅನ್ಜರ್ ಷಾ ಖಾಸ್ಮಿ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ. ಅಲ್ಲದೇ, ಈತ ಬೆಂಗಳೂರಿನ 3 ಕಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದ್ದು, ಈತನ ಬಂಧನದಿಂದ ಬೆಂಗಳೂರಿನಲ್ಲಿ...
ಬಂಧಿತ ಮದರಸಾ ಶಿಕ್ಷಕ
ಬಂಧಿತ ಮದರಸಾ ಶಿಕ್ಷಕ

ಬೆಂಗಳೂರು: ದೆಹಲಿ ಪೊಲೀಸ್ ವಿಶೇಷ ಘಟಕ ಬುಧವಾರ ಬೆಂಗಳೂರಿನಲ್ಲಿ ಬಂಧಿಸಿದ್ದ ಮೌಲ್ವಿ ಅನ್ಜರ್ ಷಾ ಖಾಸ್ಮಿ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ. ಅಲ್ಲದೇ, ಈತ ಬೆಂಗಳೂರಿನ 3 ಕಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದ್ದು, ಈತನ ಬಂಧನದಿಂದ ಬೆಂಗಳೂರಿನಲ್ಲಿ ನಡೆಯಬಹುದಾಗಿದ್ದ ಉಗ್ರರ ಭೀಕರ ದಾಳಿಯೊಂದನ್ನು ತಪ್ಪಿಸಿದಂತಾಗಿದೆ.

ಭಾರತದಲ್ಲಿ ಅದರಲ್ಲೂ ಕರ್ನಾಟಕಲ್ಲಿ ಅಲ್‍ಖೈದಾ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಕಾರ್ಯಚಟುವಟಿಕೆ ನಡೆಸುತ್ತಿದ್ದ ಅನ್ಜರ್ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಯುವಕರನ್ನು ಸೆಳೆಯುತ್ತಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಉತ್ತರಪ್ರದೇಶದ ದಾರೂಲ್ ಉಲುಂ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ, ಮೌಲ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈತನ ಚಲನ ವಲನದ ಬಗ್ಗೆ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ದಳ ಬಹಳ ದಿನಗಳಿಂದ ಕಣ್ಣಿಟ್ಟಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಬುಧವಾರ ಅನ್ಜರ್ ಷಾ ಅವನನ್ನು ಬಂಧಿಸಿದ್ದಾರೆ.

ವಿಚಾರಣೆ ನಡೆಸುತ್ತಿರುವ ಪೊಲೀಸರು ದೆಹಲಿಯ ಸ್ಥಳೀಯ ಕೋರ್ಟ್‍ಗೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಜ.20ರವರೆಗೆ ತಮ್ಮ ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಇಬ್ಬರು ಮೌಲ್ವಿಗಳು ಸೇರಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

ಅನ್ಜರ್ ಹಿನ್ನೆಲೆ: ಅನ್ಜರ್ ಷಾ ಖಾಸ್ಮಿ ಹುಟ್ಟಿದ್ದು ಶಿವಾಜಿನಗರದಲ್ಲಿ, ಪ್ರಾಥಮಿಕ ವಿದ್ಯಾಭ್ಯಾಸವನ್ನು ಇಲ್ಲಿನ ಸ್ಥಳೀಯ ಶಾಲೆಯಲ್ಲಿಯೇ ಮುಗಿಸುತ್ತಾನೆ. ನಂತರ ಉನ್ನತ ವ್ಯಾಸಂಗಕ್ಕಾಗಿ ಉತ್ತರಪ್ರದೇಶಕ್ಕೆ ಹೋಗಿ ಅಲ್ಲಿನ ಉತ್ತರಪ್ರದೇಶದ ದಾರೂಲ್ ಉಲುಂ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಮೌಲ್ವಿ ಪದವಿ ಪಡೆಯುತ್ತಾನೆ.

ನಂತರ ಬೆಂಗಳೂರಿನ ಬನಶಂಕರಿಯ ಮಸೀದಿಯೊಂದರ ಮೌಲ್ವಿಯಾಗಿದ್ದ ಅನ್ಜರ್ ಷಾ ಖಾಸ್ಮಿ ಈ ಮೊದಲು ಬೈರಸಂದ್ರದ ಮಸೀದಿಯಲ್ಲಿ ಮೌಲ್ವಿಯಾಗಿ ಕಾರ್ಯನಿರ್ವಹಿಸಿದ್ದ, ನಂತರ ತಿಲಕ್‍ನಗರ ಮಸೀದಿಯಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿದ್ದ. ಈ ವೇಳೆ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದ ಆರೋಪ ಮೇಲೆ ಈತನನ್ನು ಉಚ್ಚಾಟಿಸಲಾಗಿತ್ತು.

ನಂತರ ಆಯ್ಕೆ ಮಾಡಿಕೊಂಡಿದ್ದು ಕಾವೇರಿನಗರದ ಮೆಕ್ಕಾ ಮಸೀದಿಯನ್ನು. ಇಲ್ಲಿಯೂ ಕೂಡ ಈತನ ನಡತೆ ಸರಿಯಿಲ್ಲದ ಕಾರಣ 14 ತಿಂಗಳ ಹಿಂದೆ ಉಚ್ಚಾಟಿಸಲಾಗಿತ್ತು. ಆದರೆ, ಖಾಸ್ಮಿ ತನ್ನ ಪ್ರಭಾವ ಬಳಸಿ ಮುಸ್ಲಿಂ ಸಂಘಟನೆಗಳ ಪ್ರಭಾವದಿಂದ ಮೆಕ್ಕಾ ಮಸೀದಿಯಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದ.

ಇದೇ ವೃತ್ತಿಯನ್ನು ಕಳೆದ 30 ವರ್ಷಗಳಿಂದ ಮಾಡಿಕೊಂಡು ಬಂದಿದ್ದ. ಸಹಚರರ ಮೇಲೂ ನಿಗಾ: ಕಳೆದ 2014ರಿಂದಲೂ ಅಲ್ ಖೈದಾ ಭಾರತ ಘಟಕ ಸ್ಥಾಪನೆಗಾಗಿ ಪ್ರಯತ್ನ ನಡೆಯುತ್ತಿದೆ. ಆರಂಭದಲ್ಲಿ ಸ್ಲೀಪರ್ ಸೆಲ್ಸ್‍ಗಳ ರಚನೆ ಮಾಡಲಾಗುತ್ತಿದೆ. ಸಾಮಾನ್ಯರಂತೆಯೇ ಇದ್ದು, ಸೂಚನೆ ಬಂದಾಗ, ವಿಧ್ವಂಸಕ ಚಟುವಟಿಕೆ ನಡೆಸುವವರನ್ನು ಸ್ಲೀಪರ್ ಸೆಲ್ಸï ಎಂದು ಕರೆಯಲಾಗುತ್ತದೆ.

ಅಂತಹ ಯುವಕರ ಸಮೂಹಕ್ಕೆ ಅಗತ್ಯ ನೆರವು ನೀಡುವುದಕ್ಕೆ ಅನ್ಜರ್ ಷಾ ಖಾಸ್ಮಿಗೆ ಸೂಚಿಸಲಾಗಿತ್ತು ಎಂದು ತನಿಖಾಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಪ್ರಚೋದನಕಾರಿ ಭಾಷಣ, ಷರಿಯಾ ಕಾನೂನಿನಂತೆ ನಡೆದುಕೊಳ್ಳಬೇಕು ಎಂದು ಕಟುವಾಗಿ ಆಜ್ಞೆ ಮಾಡುತ್ತಿದ್ದರಿಂದ, ಬೆಂಗಳೂರಿನ ಮೌಲ್ವಿಗಳು ಖಾಸ್ಮಿಯಿಂದ ದೂರ ಸರಿದಿದ್ದರು. ಈ ಕುರಿತು ಹಲವರು ಅಸಮಾಧಾನವನ್ನು ಹೊಂದಿದ್ದರು. ಇದೀಗ ಅನ್ಜರ್ ಖಾಸ್ಮಿಯ ಬಂಧನವಾಗಿದ್ದು, ಬೆಂಗಳೂರಿನಲ್ಲಿರುವ ಆತನ ಸಹಚರರ ಮೇಲೆ ನಿಗಾ ಇರಿಸಲಾಗಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಮೂರು ಕಡೆ ಸ್ಫೋಟಕ್ಕೆ ಸಂಚು: ಬೆಂಗಳೂರು ಸೇರಿದಂತೆ ರಾಜ್ಯದ ಮೂರು ಕಡೆ ಸ್ಫೋಟಕ್ಕೆ ಅನ್ವರ್ ಸಂಚು ರೂಪಿಸಿದ್ದ ಎನ್ನಲಾಗಿದೆ. ಸ್ಫೋಟಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಈತನ ಸಹಚರರು ಮಾಡಿದ್ದರು. ಆದರೆ, ಈತ ಮಾತ್ರ ಸ್ಥಳ ಗುರುತಿಸಿರಲಿಲ್ಲ. ಪ್ರತಿ ಬಾರಿಯೂ ಸ್ಥಳ ಗುರುತಿಸುತ್ತೇನೆ ಎಂದು ಹೇಳಿ ವಿಫಲನಾಗುತ್ತಿದ್ದ. ಇದೀಗ ಈತನ ಬಂಧನದಿಂದ ಮುಂದೆ ಆಗಬಹುದಾದ ದೊಡ್ಡ ಅನಾಹುತ ತಪ್ಪಿದೆ ಎಂದು ಮೂಲಗಳು ತಿಳಿಸಿವೆ.

ಖಾಸ್ಮಿಗಿತ್ತು ಗುಪ್ತನಾಮ : ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದ ಅನ್ಜರ್ ಷಾ ಖಾಸ್ಮಿಗೆ ಗುಪ್ತ ಹೆಸರೊಂದಿತ್ತು. `ಬಿತ್' ಹೆಸರಿನಲ್ಲಿ ಎಲ್ಲಾ ರೀತಿಯ ಉಗ್ರ ಚಟುವಟಿಕೆ ಗಳನ್ನು ನಡೆಸುತ್ತಿದ್ದ. ಈ ಗುಪ್ತ ಹೆಸರನ್ನು ಡಿಕೋಡ್ ಮಾಡಿದಾಗ ಮೊದಲು ಸಿಕ್ಕಿದ್ದೇ `ಬಿ' ಎಂದರೆ ಬೆಂಗಳೂರು ಎಂದು. ಈ ಮಾಹಿತಿ ಕಲೆ ಹಾಕಿದ್ದ ಎನ್‍ಐಎ ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಖಾಸ್ಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್‍ಖೈದಾ ನೇಮಕಾತಿ
ಮುಖ್ಯಸ್ಥನೊಂದಿಗೆ ನಂಟು ಗುಪ್ತಚರ ಇಲಾಖೆ (ಐಬಿ) ಹಲವು ತಿಂಗಳಿಂದ ಅನ್ಜರ್ ಷಾ ಮೇಲೆ ಕಣ್ಣಿಟ್ಟಿತ್ತು. ಪ್ರಚೋದನಕಾರಿ ಭಾಷಣದ ಜೊತೆಗೆ, ಪಾಕಿಸ್ತಾನದ ಕೆಲ ಸಂಘಟನೆಗಳ ಜೊತೆ ನಂಟು ಹೊಂದಿದ್ದ. ಅಲ್ಲದೆ ಕೊಲ್ಲಿ ರಾಷ್ಟ್ರದಿಂದ ಈತನಿಗೆ ಹಣ ಸರಬರಾಜಾಗಿರುವ ಬಗ್ಗೆಯೂ ಗುಪ್ತಚರ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಅನ್ಜರ್‍ನ ಪ್ರತಿ ನಡೆಯನ್ನು ಗುಪ್ತಚರ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅಲ್‍ಖೈದಾದ ಭಾರತ ಘಟಕಕ್ಕೆ ನೆರವು ನೀಡುತ್ತಿದ್ದ ಆರೋಪದ ಮೇಲೆ, ಇತ್ತೀಚೆಗಷ್ಟೇ, ಒಡಿಶಾದ ಕಟಕ್ ಜಿಲ್ಲೆಯ ಮೌಲ್ವಿ ಮೊಹಮದ್ ಕಟ್ಕಿ ಎಂಬಾತನನ್ನು ಬಂಧಿಸಲಾಗಿತ್ತು.

ಈತ ಅಲ್‍ಖೈದಾ ಭಾರತ ಘಟಕದ ನೇಮಕಾತಿ ಮತ್ತು ತರಬೇತಿ ವಿಭಾಗದ ಮುಖ್ಯಸ್ಥನಾಗಿದ್ದ ಎಂದು ಹೇಳಲಾಗುತ್ತಿದೆ. ಈತನೊಂದಿಗೆ ಅನ್ಜರ್ ಖಾಸ್ಮಿ ಇಂಟರ್‍ನೆಟ್‍ನಲ್ಲಿ ಸಂಪರ್ಕ ಹೊಂದಿದ್ದ. ಅಲ್ಲದೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿರುವುದು ಕೂಡ ಗುಪ್ತಚರ ಇಲಾಖೆ ಗಮನಕ್ಕೆ ಬಂದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಉತ್ತರ ಪ್ರದೇಶದ ಜಾಫರ್ ಮಸೂದ್ ಮತ್ತು ಅಬ್ದುಲï ರೆಹಮಾನ್ ಎಂಬುವವರನ್ನು ದೆಹಲಿ ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com