ನಿನ್ನೆ ವಿಧಿಸಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆಗೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ಹೀಗಾಗಿ ಈ ಬಾರಿ ತಮಿಳುನಾಡಿನ ಜನ ಸಂಕ್ರಾಂತಿಗೆ ಜಲ್ಲಿಕಟ್ಟು ಕ್ರೀಡೆಯ ರೋಚಕತೆಯಿಂದ ವಂಚಿತರಾಗಿದ್ದಾರೆ.
ತಮಿಳರ ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಳೆದ ವಾರ ಜಲ್ಲಿಕಟ್ಟು ನಿಶೇಷಧವನ್ನು ತೆರವುಗೊಳಿಸಿ ಆದೇಶ ಹೊರಡಿಸಿತ್ತು, ಆದರೆ ಆ ದೇಶಕ್ಕೆ ನಿನ್ನೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು.
ಜಲ್ಲಿಕಟ್ಟು ಆಚರಣೆಗೆ ತಡೆಯಾಜ್ಞೆ ವಿಧಿಸಿದ್ದರಿಂದ ತಮಿಳುನಾಡಿನಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಧುರೈ ಸೇರಿದಂತೆ ಹಲವೆಡೆ ಸ್ವಯಂ ಬಂದ್ ಆಚರಿಸಿ, ಕೆಲ ಯುವಕರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಯೂ ಇಂದು ನಡೆದಿತ್ತು.
ಯಾವುದೇ ಕಾರಣ ಜಲ್ಲಿಕಟ್ಟು ನಿಷೇಧ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಜಸ್ಟೀಸ್ ದೀಪಕ್ ಮಿಶ್ರಾ ಮತ್ತು ಜಸ್ಟೀಸ್ ಎನ್ ವಿ ರಮಣಾ ಅವರನ್ನೊಳಗೊಂಡ ಪೀಠ ಅರ್ಜಿದಾರರಿಗೆ ಸ್ಪಷ್ಟಪಡಿಸಿದೆ. ಜಲ್ಲಿಕಟ್ಟು ಆಚರಣೆ ನಿಷೇಧ ಕುರಿತ ಅರ್ಜಿಯನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದರು. ಆ ನಿಟ್ಟಿನಲ್ಲಿ ಅರ್ಜಿಯ ವಿಚಾರಣೆ ಇಂದು ನಡೆದಿತ್ತು.