ಡಿವೈಎಸ್ಪಿ ಗಣಪತಿ ಆತ್ಮಹತ್ಯೆ; ಜಾರ್ಜ್ ರಕ್ಷಣೆಗೆ ನಿಲ್ಲಿ; ಎಲ್ಲಾ ಸಚಿವರಿಗೆ ಸಿಎಂ ಸೂಚನೆ

ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣ ಮತ್ತು ಸಾವಿಗೂ ಮೊದಲು ನೀಡಿರುವ ಹೇಳಿಕೆ ತೀವ್ರ ಸ್ವರೂಪ...
ಕೆ.ಜೆ.ಜಾರ್ಜ್ - ಸಿದ್ದರಾಮಯ್ಯ
ಕೆ.ಜೆ.ಜಾರ್ಜ್ - ಸಿದ್ದರಾಮಯ್ಯ
Updated on: 
ಬೆಂಗಳೂರು: ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣ ಮತ್ತು ಸಾವಿಗೂ ಮೊದಲು ನೀಡಿರುವ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವಂತೆಯೇ ಶುಕ್ರವಾರ ದಿಢೀರ್ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಅವರ ರಕ್ಷಣೆಗೆ ನಿಲ್ಲುವಂತೆ ಎಲ್ಲಾ ಸಚಿವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಅಧಿವೇಶನ ನಡೆಯುತ್ತಿರುವುದರಿಂದ ಪ್ರತಿಪಕ್ಷಗಳು ಗಣಪತಿ ಆತ್ಮಹತ್ಯೆ ಪ್ರಕರಣನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳುವುದು ಖಚಿತ. ಹೀಗಾಗಿ ಒಬ್ಬರಿಗೊಬ್ಬರು ಸಹಕರಿಸಿ, ಒಗ್ಗಟ್ಟು ಪ್ರದರ್ಶಿಸಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೆ ಜಾರ್ಜ್ ರಕ್ಷಣೆಗೆ ನಿಲ್ಲಿ ಎಂದಿದ್ದಾರೆ. ಸಿಎಂ ಸೂಚನೆಗೆ ಕೆಲವು ಸಚಿವರು ಮೌನವಹಿಸಿದ್ದರು ಎಂದು ಮೂಲಗಳು ತಿಳಿಸಿವೆ,
ಇನ್ನು ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್  ಅವರ ಎದುರಲ್ಲೇ ಐಜಿಪಿ ಪ್ರಣವ್ ಮೊಹಾಂತಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ಸಹ ನಡೆಯಿತು.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು. 
ಪ್ರತಿಪಕ್ಷಗಳು ಜಾರ್ಜ್ ರಾಜಿನಾಮೆ ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಆರೋಪ ಬಂದಾಕ್ಷಣ ರಾಜಿನಾಮೆ ನೀಡಬೇಕಿಲ್ಲ. ಈಗಲೂ ಅಷ್ಟೆ, ಸಚಿವ ಜಾರ್ಜ್ ರಾಜಿನಾಮೆ ನೀಡುವ ಅಗತ್ಯ ಇಲ್ಲ ಎಂದರು.
ಇನ್ನು ಕೆ.ಜೆ.ಜಾರ್ಜ್ ಸಹ ತಮ್ಮ ವಿರುದ್ಧದ ಆರೋಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ನಾನು ಯಾರಿಗೂ ಕಿರುಕುಳ ನೀಡಿಲ್ಲ. ಆತ್ಮಹತ್ಯೆಗೆ ಶರಣಾಗಿರುವ ಗಣಪತಿ ತಮ್ಮ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ತಾವು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಿಲ್ಲ ಎಂದಿದ್ದಾರೆ.
ರಾಜ್ಯ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್, ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಗಣಪತಿಯವರು ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಇನ್ಸ್‍ಪೆಕ್ಟರ್ ಆಗಿದ್ದಾಗ ಸೇವೆಯಿಂದ ಅಮಾನತುಗೊಂಡಿದ್ದರು. ಇದು ಎರಡು ವರ್ಷಗಳ ಹಿಂದೆ ನಡೆದಿತ್ತು. ಆಗ ತಾವು ಗೃಹ ಸಚಿವರಾಗಿದ್ದು, ಅಮಾನತು ವಾಪಸ್ ಪಡೆಯುವಂತೆ ಗಣಪತಿ ತಮ್ಮನ್ನು ಕೇಳಿಕೊಂಡಿದ್ದರು. ಆದರೆ ಇಲಾಖೆ ವ್ಯಾಪ್ತಿಯಲ್ಲಿ ನಡೆಯುವ ತನಿಖೆಗೆ ಅಡ್ಡಿ ಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೆ. ತಾವು ಸಚಿವರಾದ ದಿನದಿಂದಲೂ ರಾಜೀನಾಮೆಯನ್ನು ಬಿಜೆಪಿಯವರು ಕೇಳುತ್ತಿದ್ದಾರೆ. ಸುಮ್ಮನೆ ರಾಜೀನಾಮೆ ಕೇಳುವುದಲ್ಲ, ಅದರಲ್ಲಿ ಸತ್ಯವಿರಬೇಕು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com