ನೈರೋಬಿ: ಪಾಕಿಸ್ತಾನದ ಹೆಸರು ಹೇಳದೆ, ಭಯೋತ್ಪಾದಕರಿಗೆ ಆಶ್ರಯ ನೀಡುವವರೆಲ್ಲರನ್ನು ಖಂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
"ಹಿಂಸೆ ಮತ್ತು ಭಯೋತ್ಪಾಧನೆಯನ್ನು ಬೋಧಿಸಿ ನಮ್ಮ ಸಮಾಜವನ್ನು ಹಾಳುಗೆಡವುತ್ತಿರುವ ವಿಶ್ವದಲ್ಲಿ ನಾವು ಬದುಕುತ್ತಿದ್ದೇವೆ" ಎಂದು ನೈರೋಬಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ನೀಡಿದ ಭಾಷಣದಲ್ಲಿ ಹೇಳಿದ್ದಾರೆ.
"ಕೀನ್ಯಾದ ಯುವ ಮತ್ತು ಚಲನಶೀಲ ನಾಗರಿಕರಾಗಿ ಮತ್ತು ಆಫ್ರಿಕನ್ ಸಮಾಜದ ಸದಸ್ಯರಾಗಿ, ತೀವ್ರತಮ ಸಿದ್ಧಾಂತಗಳನ್ನು ಹರಡುವವರ ಬಗ್ಗೆ ನೀವು ಎಚ್ಚರದಿಂದರಬೇಕು" ಎಂದು ಮೋದಿ ಕಿವಿಮಾತು ಹೇಳಿದ್ದಾರೆ.
"ಹಾಗೆಯೇ ಭಯೋತ್ಪಾದಕರಿಗೆ ಆಶ್ರಯ ನೀಡಿ ಅವರನ್ನು ರಾಜಕೀಯ ಕೈಗೊಂಬೆಗಳಾಗಿ ಬಳಸುವವರನ್ನು ಸಮಾನವಾಗಿ ಖಂಡಿಸಿ" ಎಂದು ಕೂಡ ಅವರು ಹೇಳಿದ್ದಾರೆ.
ಕೀನ್ಯಾ ಕೂಡ ಭಯೋತ್ಪಾದಕ ಕೃತ್ಯಗಳಿಗೆ ಬಲಿಯಾಗಿದೆ. ಸೋಮಾಲಿಯಾ ಗಡಿಯ ಅಲ್ ಶಬಾಬ್ ಭಯೋತ್ಪಾದಕ ಸಂಘಟನೆಯಿಂದ ಕೀನ್ಯಾದಲ್ಲಿ ಹಲವಾರು ಭಯೋತ್ಪಾದಕ ಘಟನೆಗಳು ಸಂಭವಿಸಿವೆ.
ಈ ಭಾಷಣಕ್ಕೂ ಮುಂಚಿತವಾಗಿ ವಿಶ್ವವಿದ್ಯಾಲಯದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಹೂವು ಅರ್ಪಿಸಿ ಮೋದಿ ಗೌರವ ಸಲ್ಲಿಸಿದ್ದಾರೆ.
ನಾಲ್ಕು ಆಫ್ರಿಕಾ ದೇಶಗಳ ಕೊನೆಯ ಭಾಗದ ಪ್ರವಾಸವಾಗಿ ಶನಿವಾರ ಕೀನ್ಯಾಗೆ ಬಂದಿಳಿದ ಪ್ರಧಾನಿ ಸೋಮವಾರ ತಡರಾತ್ರಿ ಭಾರತಕ್ಕೆ ಹಿಂದಿರುಗಲಿದ್ದಾರೆ.