ನವದೆಹಲಿ: ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಾಶ್ಮೀರ, ರೈತರ ಆತ್ಮಹತ್ಯೆಗಳು ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆ ಈ ವಿಷಯಗಳ ಬಗ್ಗೆ ಮುಂಬರಲಿರುವ ಸ್ವತಂತ್ರ ದಿನಾಚಾರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಸಲಹೆ ನೀಡಿದ್ದಾರೆ.
"ಸರ್, ದಯವಿಟ್ಟು ದಲಿತರ ದೌರ್ಜನ್ಯ, ಗೋ ರಕ್ಷಕರು, ಕಾಶ್ಮೀರ, ಅಖಲಕ್, ರೈತರ ಆತ್ಮಹತ್ಯೆಗಳು, ಬೇಳೆ ಬೆಲೆ ಏರಿಕೆ ಇವುಗಳ ಬಗ್ಗೆ ಮಾತನಾಡಿ. ಇವುಗಳ ಬಗ್ಗೆ ನಿಮ್ಮ ಮಾತು ಕೇಳಲು ಜನ ಕಾಯುತ್ತಿದ್ದಾರೆ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 15 ರ ಭಾಷಣಕ್ಕೆ ಮೋದಿ ಸಾಮಾಜಿಕ ಅಂತರ್ಜಾಲದಲ್ಲಿ ಸಲಹೆಗಳನ್ನು ಕೇಳಿದ್ದರ ಹಿನ್ನಲೆಯಲ್ಲಿ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.
"ನನ್ನ ಆಗಸ್ಟ್ 15ರ ಭಾಷಣ 125 ಕೋಟಿ ಭಾರತೀಯರನ್ನು ಪ್ರತಿನಿಧಿಸಬೇಕು. ಭಾಷಣದ ಬಗ್ಗೆ ನಿಮ್ಮ ಹೊಳಹುಗಳನ್ನು (ನರೇಂದ್ರ ಮೋದಿ) ಮೊಬೈಲ್ ಆಪ್ ನಲ್ಲಿ ಹಂಚಿಕೊಳ್ಳಿ" ಎಂದು ಮೋದಿ ಮನವಿ ಮಾಡಿದ್ದರು.