

ಹೈದರಾಬಾದ್: ಹೈದರಾಬಾದ್ ಹಳೆ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ಭಾಗ ಕುಸಿದಿದ್ದರ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟು ಏಳು ಜನರಿಗೆ ಗಾಯವಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸೈಟ್ ಎಂಜಿನಿಯರ್ ಸೇರಿ ಗಾಯಗೊಂಡ ಏಳು ಜನರನ್ನು ಒಸ್ಮಾನಿಯ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ.
ಮೃತಪಟ್ಟವರನ್ನು ನಂದು ಮತ್ತು ವೆಂಕಟಯ್ಯ ಎಂದು ಗುರುತಿಸಲಾಗಿದ್ದು, ಇಬ್ಬರೂ ಮಹ್ಬೂದ್ ನಗರ ಜಿಲ್ಲೆಗೆ ಸೇರಿದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾರ್ ಮಿನಾರ್ ಬಳಿ ಹುಸ್ಸೇನಿಯಾಲಮ್ ಪ್ರದೇಶದ ಖಭೂತರ್ಖಾನದಲ್ಲಿ ಮಹೇಶ್ವರಿ ಟ್ರಸ್ಟ್ ನ ಶಾಲಾ ಕಟ್ಟಡ ನಿರ್ಮಾಣ ಹಂತದಲ್ಲಿದ್ದಾಗ ಕುಸಿದಿದೆ.
ಈ ಕಟ್ಟಡ ಕಟ್ಟಲು ಟ್ರಸ್ಟ್ ನವರು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ (ಜಿ ಎಚ್ ಎಂ ಸಿ) ನಿಂದ ಪರವಾನಗಿ ಪಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದು ಪ್ರಕರಣ ದಾಖಲಿಸಿದ್ದಾರೆ.