

ನವದೆಹಲಿ: ಹಳೆಯ ಕಾಲದ ದೇಶದ್ರೋಹ ಕಾನೂನು ದುರ್ಬಳಕೆಯಾಗುತ್ತಿದೆ ಎಂಬ ವಾಗ್ವಾದಗಳು ತೀವ್ರವಾಗಿರುವ ಹಿನ್ನಲೆಯಲ್ಲಿ, ಈ ಕಾನೂನಿನ ಬಳಕೆಯ ಬಗ್ಗೆ ವರದಿ ನೀಡುವಂತೆ ಕಾನೂನು ಆಯೋಗಕ್ಕೆ ಸೂಚಿಸಿದ್ದೇವೆ ಎಂದು ಮಂಗಳವಾರ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ.
ಐಪಿಸಿ ಕಾಯ್ದೆ ೧೨೪ಎ ಬಳಕೆಯ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ಕಾನೂನು ಆಯೋಗಕ್ಕೆ, ಕಾನೂನು ಮತ್ತು ನ್ಯಾಯ ಸಚಿವಾಲಯ ಕೇಳಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಹರಿಭಾಯಿ ಪರಥಿಭಾಯಿ ಚೌಧರಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂಬ ಆರೋಪದ ಮೇರೆಗೆ ಜವಾಹಾರ್ ನೆಹರೂ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳು, ಕನ್ಹಯ್ಯ ಕುಮಾರ್, ಉಮರ್ ಖಲೀದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರನ್ನು ದೆಹಲಿ ಪೊಲೀಸರು ದೇಶದ್ರೋಹದ ಆರೋಪದ ಮೇಲೆ ಬಂಧಿಸಿದ್ದರು. ಈ ಕ್ರಮ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ಜರುಗುತ್ತಿವೆ.
ಇದೇ ವಿಷಯದ ಹಿನ್ನಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಿಪಿಐ(ಎಂ) ಸಾಮಾನ್ಯ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಮೇಲೂ ಹೈದರಾಬಾದ್ ನಲ್ಲಿ ಸೆಡಿಶನ್ ಪ್ರಕರಣಗಳನ್ನು ದಾಖಲಿಸಲಾಗಿದೆ.