ನವದೆಹಲಿ: ಸರ್ಕಾರಿ ವೈದ್ಯಕೀಯ ಕಾಲೇಜ್ ಗಳ ಪ್ರವೇಶಕ್ಕಾಗಿ ರಾಜ್ಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಅನುಮತಿ ನೀಡಬಹುದು ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಆದರೆ ಖಾಸಗಿ ಹಾಗೂ ಅನುದಾನರಹಿತ ವೈದ್ಯಕೀಯ ಕಾಲೇಜುಗಳು ಎಂಬಿಬಿಎಸ್ ಮತ್ತು ಬಿಡಿಎಸ್ ಪರೀಕ್ಷೆ ನಡೆಸುವಂತಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸುಗಳ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ವಿಷಯದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ ಆರ್ ದಾವೆ ನೇತೃತ್ವದ ಸುಪ್ರೀಂ ಪೀಠ, ನೀಟ್ ನಿಂದ ಖಾಸಗಿ ಕಾಲೇಜುಗಳಿಗೆ ವಿನಾಯ್ತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಆಯಾ ರಾಜ್ಯಗಳಿಗಳಿಗೆ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್ ಗಳ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ ನಡೆಸುವ ಅವಕಾಶ ನೀಡುವುದರ ಬಗ್ಗೆ ಅಭಿಪ್ರಾಯ ತಿಳಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಗೆ ಸೂಚಿಸಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಮೇ 1ರಂದು ನಡೆದ ನೀಟ್ ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತೆ ಜು.24ರಂದು ನಡೆಯಲಿರುವ ಎರಡನೇ ಹಂತದ ನೀಟ್ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬಹುದೇ ಎನ್ನುವ ಬಗ್ಗೆಯೂ ವಿವರ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿದೆ.