ಕಾರ್ಮಿಕ ನೀತಿ ವಿರೋಧಿಸಿ ಭಾರತ್ ಬಂದ್; ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲದೆ ಜನಜೀವನ ಅಸ್ತವ್ಯಸ್ಥ
ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕಾರ್ಮಿಕ ನೀತಿ ವಿರೋಧಿಸಿ ಕೇಂದ್ರ ನೌಕರರ ಒಕ್ಕೂಟ ಕರೆ ನೀಡಿರುವ ಭಾರತ್ ಬಂದ್ ನಿಂದಾಗಿ ಸರ್ಕಾರಿ ಬಸ್ ಸೇವೆಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಕರ್ನಾಟಕದ ಹಲವೆಡೆ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ದೊರೆತಿದೆಯಾದರೂ, ಸರ್ಕಾರಿ ಬಸ್ ಸೇವೆಗಳು ಸ್ಥಗಿತಗೊಂಡ ಹಿನ್ನಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಮೈಸೂರು, ತುಮಕೂರು, ಯಾದಗಿರಿ, ಕೋಲಾರ, ಚಿಕ್ಕಮಗಳೂರು, ಪುತ್ತೂರು ಜಿಲ್ಲೆಗಳಲ್ಲಿ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ ಅಲ್ಪ ಪ್ರಮಾಣದ ಬಸ್ ಗಳು ಸಂಚಾರ ಆರಂಭಿಸಿವೆ.
ಇನ್ನು ತುಮಕೂರು ಯಾದಗಿರಿ, ಕೋಲಾರ, ಚಿಕ್ಕಮಗಳೂರು, ಪುತ್ತೂರು ವಿಭಾಗಗಳಲ್ಲಿ ಖಾಸಗಿ ಬಸ್ ಸೇವೆ ಅಬಾಧಿತವಾಗಿದ್ದು, ಈ ಭಾಗಗಳಲ್ಲಿ ಎಂದಿನಂತೆ ಖಾಸಗಿ ಬಸ್ ಗಳು ಪ್ರಯಾಣ ನಡೆಸುತ್ತಿವೆ. ಮೈಸೂರಿನಲ್ಲಿ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನು ಹಾಸನದಲ್ಲೂ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಖಾಸಗಿ ಬಸ್ ಗಳು ಎಂದಿನಂತೆ ತಮ್ಮ ಕಾರ್ಯ ನಿರ್ವಹಿಸುತ್ತಿವೆ. ಹಾಸನದಲ್ಲಿ ಪ್ರಸ್ತುತ 27 ಬಸ್ ಗಳನ್ನು ಸಾರಿಗೆ ಸೇವೆಗಾಗಿ ನಿಯೋಜಿಸಲಾಗಿದ್ದು, ಪರಿಸ್ಥಿತಿ ಅವಲೋಕಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹಾಸನ ಸಾರಿಗೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ತುಮಕೂರಿನಲ್ಲಿಯೂ ಸಹ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತುಮಕೂರಿನ ರೈಲ್ವೇ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರು ಪ್ರಯಾಣ ನಡೆಸಿದ್ದಾರೆ. ಸರ್ಕಾರಿ ಬಸ್ ಸೇವೆ ಸ್ಥಗಿತಗೊಂಡಿರುವುದರಿಂದ ತುಮಕೂರು ರೈಲ್ವೇ ನಿಲ್ದಾಣದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ಆಗಮಿಸಿದ್ದಾರೆ.
ಯಾದಗಿರಿಯಲ್ಲಿ ಸರ್ಕಾರಿ ಬಸ್ ಸೇವೆ ಸ್ಥಗಿತಗೊಂಡಿದ್ದು, ಖಾಸಗಿ ಬಸ್ ಗಳು ಅಬಾಧಿತವಾಗಿದೆ. ಯಾದಗಿರ ಪ್ರಮುಖ ರಸ್ತೆಗಳಲ್ಲಿ ಕಾರ್ಮಿಕರ ಸಂಘ ಪ್ರತಿಭಟನೆ ನಡೆಸುತ್ತಿದೆ. ಇನ್ನು ಚಿತ್ರದುರ್ಗದಲ್ಲಿ ಸರ್ಕಾರಿ ಬಸ್ ಸೇವೆ ಸ್ಥಗಿತಗೊಂಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಖಾಸಗಿ ಬಸ್ ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ರಾಯಚೂರಿನಲ್ಲಿ ಕಾರ್ಮಿಕರ ಒಕ್ಕೂಟ ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರುದ್ಧ ಬೈಕ್ ರ್ಯಾಲಿ ಹಮ್ಮಿಕೊಂಡಿವೆ.
ಒಟ್ಟಾರೆ ಇಂದು ಕೇಂದ್ರ ನೌಕರರ ಒಕ್ಕೂಟ ಕರೆ ನೀಡಿರುವ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ