ಕಾವೇರಿ ಪರಿಹಾರಕ್ಕೆ ಇಂದು ವಿಶೇಷ ಅಧಿವೇಶನ: ಅಂತಿಮ ನಿರ್ಧಾರ ಸಾಧ್ಯತೆ

ಎರಡು ರಾಜ್ಯಗಳ ವೈಮನಸ್ಸಿಗೆ ಕಾರಣವಾಗಿರುವ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಶುಕ್ರವಾರ ವಿಶೇಷ ಅಧಿವೇಶನ ನಡೆಯಲಿದ್ದು, ಅಧಿವೇಶನದ ಬಳಿಕ ರಾಜ್ಯ ಸರ್ಕಾರ ಅಂತಿಮ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಎರಡು ರಾಜ್ಯಗಳ ವೈಮನಸ್ಸಿಗೆ ಕಾರಣವಾಗಿರುವ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಶುಕ್ರವಾರ ವಿಶೇಷ ಅಧಿವೇಶನ ನಡೆಯಲಿದ್ದು, ಅಧಿವೇಶನದ ಬಳಿಕ ರಾಜ್ಯ ಸರ್ಕಾರ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ.

ಇಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಕಾವೇರಿ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ ನಂತರ ಜಲ ಸಂಕಷ್ಟದಿಂದಾಗಿ ತಮಿಳುನಾಡಿಗೆ ನೀರು ಹರಿಸಲಾಗದು ಎನ್ನುವ ನಿರ್ಣಯವನ್ನು ಕೈಗೊಳ್ಳುವ ಸಾಧ್ಯತೆಗಳಿವೆ.

ಸೆ.20 ರಂದು ಕಾವೇರಿ ವಿವಾದ ಕುರಿತಂತೆ ಸುಪ್ರೀಂ ತೀರ್ಪು ನೀಡಿತ್ತು. ಸೆ.26ರವರೆಗೂ ಪ್ರತೀ ನಿತ್ಯ 6 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಬೇಕೆಂದು ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆದೇಶದಂತೆ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬ ನಿರ್ಣಯವನ್ನು ಉಭಯ ಸದನಗಳಲ್ಲಿ ಮಂಡಿಸಿ ಅದಕ್ಕೆ ಸರ್ವಾನುಮತದ ಅನುಮೋದನೆಯನ್ನು ಪಡೆಯುವ ಸಾಧ್ಯತೆಗಳಿವೆ.

ಈ ಕುರಿತಂತೆ ಕಾಂಗ್ರೆಸ್ ಶಾಸಕರಿಗೆ ವಿಪ್ ನ್ನು ಜಾರಿ ಮಾಡಲಾಗಿದ್ದು, ಸದನದಲ್ಲಿ ಕಾವೇರಿ ಕೊಳ್ಳದ ಶಾಸಕರು ಚರ್ಚೆ ನಡೆಸುವಂತೆ ಸೂಚನೆ ನೀಡಲಾಗಿದೆ. ನೀರು ಬಿಡಲು ಸಾಧ್ಯವಿಲ್ಲ ಎಂಬ ನಿರ್ಣಯವನ್ನು ಸದನದಲ್ಲಿ ಸ್ವತಃ ಕಾನೂನು ಸಚಿವರೇ ಮಂಡನೆ ಮಾಡಲಿದ್ದು, ಇದನ್ನು ಪ್ರತಿಪಕ್ಷಗಳು, ಕಾಂಗ್ರೆಸ್ ನ ಯಾರಾದರೂ ಅನಮೋದನೆಗೊಳಿಸಬಹುದು. ಅಂತಿಮವಾಗಿ ನಿರ್ಣಯವನ್ನು ಒಮ್ಮತದೊಂದಿಗೆ ಅಂಗೀಕರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸಭೆಯನ್ನು ನಡೆಸಿ ನಾಯಕರ ಜೊತೆಗೆ ಚರ್ಚೆ ನಡೆಸಿದ್ದರು. ನಂತರ ಸರ್ವಪಕ್ಷ ಸಭೆಯನ್ನು ನಡೆಸಿ ವಿವಿಧ ಪಕ್ಷಗಳ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು. ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದಂತೆ ಸದನದ ತೀರ್ಮಾನವಾಗುವವರೆಗೂ ನೀರು ಬಿಡುವ ವಿಚಾರವನ್ನು ಮುಂದೂಡಲಾಗಿದೆ. ಈ ವಿಚಾರವೇ ಸದನದಲ್ಲಿ ಪ್ರಸ್ತಾವವಾಗಲಿದೆ. ವಿವಿಧ ಪಕ್ಷಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿ ಬಳಿಕ ಸದನ ಸರ್ವಾನುಮತದ ನಿರ್ಣಯವೊಂದನ್ನು ಅಂಗೀಕರಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com