ಭಾರತಕ್ಕೆ ಬಿಹಾರದ 'ಮಹಾಘಟಬಂಧನ್' ರೀತಿಯ ಮೈತ್ರಿ ಅವಶ್ಯಕತೆ ಇದೆ: ನಿತೀಶ್ ಕುಮಾರ್
೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮಣಿಸಲು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳ 'ಮಹಾಘಟಬಂಧನ್' (ಮಹಾಮೈತ್ರಿ) ಅವಶ್ಯಕತೆ ಇದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್
ಪಾಟ್ನಾ: ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮಣಿಸಲು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳ 'ಮಹಾಘಟಬಂಧನ್' (ಮಹಾಮೈತ್ರಿ) ಅವಶ್ಯಕತೆ ಇದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಹೇಳಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ 'ಮಹಾಮೈತ್ರಿ' ಯಶಸ್ಸು ತರಬಲ್ಲದು ಎಂದು ಜನತಾದಳ ಸಂಯುಕ್ತ ಪಕ್ಷದ ಮುಖಂಡ ಮಾಧ್ಯಮಗಳಿಗೆ ತಿಳಿಸಿದ್ದಾರೆ.
"೨೦೧೫ ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು, ಆರ್ ಜೆ ಡಿ ಮತ್ತು ಕಾಂಗ್ರೆಸ್ ಪಕ್ಷಗಳ ಮಹಾ ಮೈತ್ರಿ ಯಶಸ್ಸು ಕಂಡು ಬಿಜೆಪಿ ಮುಂದಾಳತ್ವದ ಎನ್ ಡಿ ಎಯನ್ನು ಸೋಲಿಸಿತು" ಎಂದು ಕೂಡ ಅವರು ಹೇಳಿದ್ದಾರೆ.
"ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳ ಮಹಾ ಮೈತ್ರಿಯೊಂದೇ ಉತ್ತರ" ಎಂದಿರುವ ನಿತೀಶ್ ನವದೆಹಲಿಯಲ್ಲಿ ಆಡಳಿತ ನಡೆಸುವವರ ವಿರುದ್ಧ ಅಜೆಂಡಾ ರೂಪಿಸುವ ಬದಲು ಬಿಜೆಪಿಯೇತರ ಪಕ್ಷಗಳು ತಮ್ಮದೇ ಸ್ವಂತ ಅಜೆಂಡಾವನ್ನು ರೂಪಿಸಿಕೊಳ್ಳಬೇಕು ಎಂದಿದ್ದಾರೆ.
ಪ್ರಧಾನಿ ಹುದ್ದೆಗೆ ನಾಯಕರ ಕೊರತೆಯೇನು ಇಲ್ಲ ಎಂದು ಕೂಡ ನಿತೀಶ್ ಕುಮಾರ್ ಹೇಳಿದ್ದಾರೆ.