ನವದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇತ್ತೀಚಿಗಷ್ಟೇ ಸುಮಾರು 500 ಶೆಲ್ ಕಂಪನಿಗಳ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ(ಇಡಿ), ಈ ಸಂಬಂಧ ಮಂಗಳವಾರ ಬೆಂಗಳೂರು ಹಾಗೂ ಚೆನ್ನೈನಲ್ಲಿ ಇಬ್ಬರನ್ನು ಬಂಧಿಸಿದೆ.
ಬಂಧಿತರನ್ನು ಜಿಡಿ ರೆಡ್ಡಿ ಹಾಗೂ ಕೆ ಲಿಯಾಕತ್ ಅಲಿ ಎಂದು ಗುರುತಿಸಲಾಗಿದ್ದು, ಈ ಇಬ್ಬರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ.1 ರಂದು ಕೇವಲ ದಾಖಲೆಯಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಶೆಲ್ ಕಂಪನಿಗಳ ಮೇಲೆ ದೇಶಾದ್ಯಂತ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಸುಮಾರು 20 ಕೋಟಿ ರುಪಾಯಿ ಬ್ಯಾಂಕ್ ಡೆಪೊಸಿಟ್ ಅನ್ನು ಜಪ್ತಿ ಮಾಡಿದ್ದರು.
ದೆಹಲಿ, ಚೆನ್ನೈ, ಕೋಲ್ಕತ್ತಾ, ಚಂಡೀಗಢ, ಪಾಟ್ನಾ, ರಾಂಚಿ, ಅಹಮದಾಬಾದ್, ಭುವನೇಶ್ವರ, ಬೆಂಗಳೂರು ನಗರಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.