ಜಲ್ಲಿಕಟ್ಟು ಅಯ್ತು, ಈಗ ಕೇಂದ್ರ ಸರ್ಕಾರದ ಹೈಡ್ರೋ ಕಾರ್ಬನ್ ಯೋಜನೆ ವಿರುದ್ಧ ತ.ನಾಡು ಪ್ರತಿಭಟನೆ

ಜಲ್ಲಿಕಟ್ಟು ಪ್ರತಿಭಟನೆ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ತಮಿಳುನಾಡು ಜನತೆ ಇದೀಗ ಅಂತಹುದೇ ಮತ್ತೊಂದು ಹೋರಾಟಕ್ಕೆ ಧುಮುಕಿದ್ದಾರೆ.
ಪ್ರತಿಭಟನಾ ನಿರತ ಗ್ರಾಮಸ್ಥರು
ಪ್ರತಿಭಟನಾ ನಿರತ ಗ್ರಾಮಸ್ಥರು
Updated on

ಚೆನ್ನೈ: ಜಲ್ಲಿಕಟ್ಟು ಪ್ರತಿಭಟನೆ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ತಮಿಳುನಾಡು ಜನತೆ ಇದೀಗ ಅಂತಹುದೇ ಮತ್ತೊಂದು ಹೋರಾಟಕ್ಕೆ ಧುಮುಕಿದ್ದಾರೆ.

ಕೇಂದ್ರ ಸರ್ಕಾರದ ಉದ್ದೇಶಿತ ಇಂಧನ ಹೊರತೆಗೆಯುವ ಯೋಜನೆಗೆ ತಮಿಳುನಾಡು ಜನತೆ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದು, ಕಳೆದ 2-3 ದಿನಗಳಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದೆ. ಮೂಲಗಳ ಪ್ರಕಾರ  ಕೇಂದ್ರ ಸರ್ಕಾರ ತಮಿಳುನಾಡಿನ ಪುದುಕೋಟೈ ಜಿಲ್ಲೆಯ ನೆಡುವಾಸಲ್ ಗ್ರಾಮದ ಬಳಿ ಹೈಡ್ರೋಕಾರ್ಬನ್ ಇಂಧನವನ್ನು ಹೊರತೆಗೆಯುವ ಯೋಜನೆ ಹಾಕಿಕೊಂಡಿದ್ದು, ಈ ಯೋಜನೆಗೆ ಅಲ್ಲಿನ ಗ್ರಾಮಸ್ಥರು ತೀವ್ರ ವಿರೋಧ  ವ್ಯಕ್ತಪಡಿಸಿದ್ದಾರೆ. ಭೂಮಿಯಾಳದಲ್ಲಿರುವ ಇಂಧನವನ್ನು ಹೊರತೆಗೆಯುವುದರಿಂದ ಇಲ್ಲಿನ ಅಂತರ್ಜಲ ಮಟ್ಟ ಕುಸಿಯುತ್ತದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಈ ಗ್ರಾಮದ ಬಹುತೇಕ ಮಂದಿ ಕೃಷಿಯನ್ನೇ ಜೀವನಾಧಾರಕ್ಕಾಗಿ ನೆಚ್ಚಿಕೊಂಡಿದ್ದು, ಕೇಂದ್ರ ಸರ್ಕಾರದ ಯೋಜನೆಯಿಂದ ಕೃಷಿ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ  ಯೋಜನೆಯನ್ನು ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರಮುಖವಾಗಿ ಆರಂಭದಲ್ಲಿ ಕೃಷಿಕ ವರ್ಗ ಹಾಗೂ ಕೆಲ ರೈತ ಮುಖಂಡರಿಂದ ಆರಂಭವಾದ ಈ ಹೋರಾಟಕ್ಕೆ ಇದೀಗ ವಿದ್ಯಾರ್ಥಿಗಳು ಸಹ  ಧುಮುಕಿದ್ದು, ಚೆನ್ನೈ ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.

ಈ ಯೋಜನೆಯಿಂದಾಗಿ ಕೇಂದ್ರ ಸರ್ಕಾರ 31 ಸಣ್ಣ ಪ್ರಮಾಣದ ಇಂಧನ ಘಟಕ ಮತ್ತು ಗ್ಯಾಸ್  ಘಟಕಗಳನ್ನು ತೆರೆಯಲು ಮುಂದಾಗಿದ್ದು, ಇದಕ್ಕಾಗಿ ಹರಾಜು ಪ್ರಕ್ರಿಯೆ ಮೂಲಕ ಇಂಧನ ಹೊರತೆಗೆಯಲು ಸಂಸ್ಥೆಗಳಿಗೆ ಗುತ್ತಿಗೆ  ನೀಡಲು ಕೇಂದ್ರ ಮುಂದಾಗಿದೆ. 31 ಅನಿಲ ಮತ್ತು ಇಂಧನ ಘಟಕಗಳ ಸ್ಥಾಪನೆಯಿಂದಾಗಿ ಪ್ರತಿನಿತ್ಯ ಸುಮಾರು 15 ಸಾವಿರ ಬ್ಯಾರಲ್ ತೈಲ ಉತ್ಪಾದಿಸುವ ಗುರಿ ಹೊಂದಲಾಗಿದ್ದು, ಇದರಿಂದ ಇಂಧನಕ್ಕಾಗಿ ಅರಬ್ ರಾಷ್ಟ್ರಗಳ  ಮೇಲೆ ಭಾರತದ ಅವಲಂಭನೆ ಕೊಂಚ ತಗ್ಗಲಿದೆ. 2020ರ ವೇಳೆಗೆ ಇಂಧನ ಆಮದು ಪ್ರಮಾಣದಲ್ಲಿ ಶೇ.10 ಇಂಧನವನ್ನು ತಗ್ಗಿಸಿ ಅದನ್ನು ಭಾರತದಲ್ಲೇ ಹೊರ ತೆಗೆಯುವ ಯೋಜನೆಯನ್ನು ಪ್ರಧಾನಿ ಮೋದಿ ಹಾಕಿಕೊಂಡಿದ್ದಾರೆ. ಅಂತೆಯೇ ಈ ಘಟಕಗಳ ಮೂಲಕ ಸುಮಾರು 46, 400 ಕೋಟಿ ರುಗಳ ಆದಾಯ ಕೂಡ ಕೇಂದ್ರ ಸರ್ಕಾರಕ್ಕೆ ಲಭಿಸುತ್ತದೆ.

ಇನ್ನು ನೆಡುವಾಸಲ್ ಗ್ರಾಮಸ್ಥರ ವಿರೋಧಕ್ಕೆ ಕಾರಣವಾಗಿರುವ ಈ ಯೋಜನೆಗೆ ಸ್ವತಃ ತಮಿಳುನಾಡಿನ ಸಿಎಂ ಪಳನಿ ಸ್ವಾಮಿ ಒಪ್ಪಿಗೆ ನೀಡಿದ್ದು, ಯೋಜನೆ ಮುಂದುವರೆಸುವಂತೆ ಪತ್ರಕೂಡ ಬರೆದಿದ್ದಾರೆ ಎಂದು ಹೇಳಾಗುತ್ತಿದೆ. ಒಟ್ಟಾರೆ ಈ ಹಿಂದೆ ಜಲ್ಲಿಕಟ್ಟು ಆಚರಣೆ ಸಂಬಂಧ ಪ್ರತಿಭಟನೆ ಮಾಡಿ ಗೆದ್ದಿದ್ದ ತಮಿಳುನಾಡು ಜನತೆ ಇದೀಗ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com