
ಬೆಂಗಳೂರು: ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಎಚ್ ಎಸ್ ಮಹದೇವ ಪ್ರಸಾದ್ ಅವರ ನಿಧನದಿಂದಾಗಿ ಆಘಾತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಎಚ್ ಎಸ್ ಮಹದೇವ ಪ್ರಸಾದ್ ಅವರ ನಿಧನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಸಾದ್ ಅವರ ಸಾವು ನಿಜಕ್ಕೂ ಅನಿರೀಕ್ಷಿತ ಮತ್ತು ಆಘಾತ ತಂದಿದೆ. ಮಲಗಿರುವಾಗಲೇ ಪ್ರಸಾದ್ ಅವರು ನಿಧನರಾಗಿದ್ದಾರೆ. ಪ್ರಸಾದ್ ಅವರ ಸಾವು ವೈಯುಕ್ತಿಕವಾಗಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ದೊಡ್ಡ ನಷ್ಟವಾಗಿದ್ದು, ಪ್ರಸಾದ್ ನಿಜಕ್ಕೂ ಓರ್ವ ಸಜ್ಜನ ರಾಜಕಾರಣಿಯಾಗಿದ್ದರು ಎಂದು ಹೇಳಿದ್ದಾರೆ.
"ಪ್ರಸಾದ್ ಮಿತಭಾಷಿಕರಾಗಿದ್ದು, ಯಾರೊಂದಿಗೂ ಕೋಪದಿಂದ ಮಾತನಾಡುತ್ತಿರಲಿಲ್ಲ. ಅವರೊಬ್ಬ ಅಜಾತ ಶತ್ರುವಾಗಿದ್ದರು. ಯಾವುದೇ ಜವಾಬ್ದಾರಿಯನ್ನು ಕೂಡ ಅಚ್ಚುಕಟ್ಟಾಗಿ ನಿಷ್ಠೆಯಿಂದ ನಿಭಾಯಿಸುತ್ತಿದ್ದರು. ಶಿಸ್ತುಬದ್ಧ ಸಚಿವರಾಗಿದ್ದರು. ತಮ್ಮ ಆಡಳಿತದ ಅವಧಿಯಲ್ಲಿ ಯಾವುದೇ ರೀತಿಯ ಕಪ್ಪುಚುಕ್ಕಿ ಇರಲಿಲ್ಲ. ಗುಂಡ್ಲುಪೇಟೆಯಿಂದ 5 ಬಾರಿ ಶಾಸಕರಾಗಿದ್ದರು. ಸತತವಾಗಿ ಗೆದ್ದ ಏಕೈಕ ರಾಜಕಾರಣಿಯಾಗಿದ್ದರು. ಕೇವಲ ಐದು ಬಾರಿ ಮಾತ್ರವಲ್ಲ ಎಷ್ಟು ಬಾರಿ ನಿಂತಿದ್ದರೂ ಗೆಲ್ಲುತ್ತಿದ್ದರು. ಉಸ್ತುವಾರಿ ಸಚಿರವಾದ ಮೇಲೆ ಚಾಮರಾಜನಗರಗಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಟವಾಗಲೂ ಶ್ರಮಿಸಿದ್ದರು. ನಾಲ್ಕು ಚುನಾವಣೆಯಲ್ಲಿ ನಾಲ್ಕರಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿವುದರಲ್ಲಿ ಪ್ರಸಾದ್ ಕೊಡುಗೆ ಅಪಾರ. ಡಿಸೆಂಬರ್ 31ರ ರಾತ್ರಿ ನಮ್ಮ ಜೊತೆಗೇ ಇದ್ದರು. ಹೊಸ ವರ್ಷಾಚರಣೆ ಮಾಡಿದ್ದರು. ಆದರೆ ಈಗ ನಾವು ದಕ್ಷ ಮಂತ್ರಿಯನ್ನು ಕಳೆದುಕೊಂಡಿದ್ದೇವೆ. ಕುಟುಂಬ ವರ್ಗಕ್ಕೆ ಪ್ರಸಾದ್ ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Advertisement