

ಚಿಕ್ಕಮಗಳೂರು: ರಾಜ್ಯ ಸಕ್ಕರೆ ಸಚಿವ ಹೆಚ್ ಎಸ್ ಮಹದೇವ ಪ್ರಸಾದ್ (58 ವರ್ಷ) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೊಪ್ಪದಲ್ಲಿ ಆಯೋಜಿಸಲಾಗಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದ ಹೆಚ್ ಎಸ್ ಮಹದೇವ ಪ್ರಸಾದ್ ಅವರು ಖಾಸಗಿ ಹೊಟೆಲ್ ನಲ್ಲಿ ತಂಗಿದ್ದರು. ಆದರೆ ರಾತ್ರಿ ಸುಮಾರು 2 ಗಂಟೆ ಹೊತ್ತಿನಲ್ಲಿ ಹೊಟೆಲ್ ಸಿಬ್ಬಂದಿ ಅವರ ಕೊಠಡಿಗೆ ತೆರಳಿ ಬಾಗಿಲು ತಟ್ಟಿದಾಗ ಅವರು ಬಾಗಿಲು ತೆರೆಯಲಿಲ್ಲ. ಬೆಳಗ್ಗೆ ಮತ್ತೆ ಬಾಗಿಲು ಬಡಿದಾಗ ಮತ್ತೆ ಅವರು ಬಾಗಿಲು ತೆಗೆಯದ ಕಾರಣ ಅನುಮಾನಗೊಂಡ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಪ್ರಸ್ತುತ ಮಹದೇವ ಪ್ರಸಾದ್ ಅವರು ತಂಗಿದ್ದ ಕೊಠಡಿಯ ಬಾಗಿಲನ್ನು ತೆರೆಯಲಾಗಿದ್ದು, ಮಹದೇವ ಪ್ರಸಾದ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಮಹದೇವ ಪ್ರಸಾದ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.