ದೆಹಲಿ ಕಸದ ಸಮಸ್ಯೆ; ಬಿಜೆಪಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ; ಭ್ರಷ್ಟಾಚಾರ ಆರೋಪ
ರಾಷ್ಟ್ರದ ರಾಜಧಾನಿ ದೆಹಲಿ ನಗರಸಭೆ ಸಿಬ್ಬಂದಿಗಳಿಗೆ ಮೀಸಲಿದ್ದ ಹಣವನ್ನು ಬಿಜೆಪಿ ಪುರಸಭೆ ಸದಸ್ಯರು ನುಂಗಿಹಾಕಿರುವುದರಿಂದ ಕಸದ ಸಮಸ್ಯೆ ಉಲ್ಬಣಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್
ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿ ನಗರಸಭೆ ಸಿಬ್ಬಂದಿಗಳಿಗೆ ಮೀಸಲಿದ್ದ ಹಣವನ್ನು ಬಿಜೆಪಿ ಪುರಸಭೆ ಸದಸ್ಯರು ನುಂಗಿಹಾಕಿರುವುದರಿಂದ ಕಸದ ಸಮಸ್ಯೆ ಉಲ್ಬಣಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೂರಿದ್ದಾರೆ.
"ಬಿಜೆಪಿ ದೆಹಲಿಯಲ್ಲಿ ಕೆಟ್ಟ ರಾಜಕೀಯ ಮಾಡುತ್ತಿದೆ. ನಗರಸಭೆ ಸಿಬ್ಬಂದಿಗಳಿಗೆ ಮೀಸಲಿದ್ದ ಹಣವನ್ನು ಅವರ ಕೌನ್ಸಲ್ಲರ್ ಗಳು ನುಂಗಿಹಾಕಿದ್ದಾರೆ ಮತ್ತು ಈಗ ದೆಹಲಿ ರಸ್ತೆಗಳ ಮೇಲೆ ಕಸವನ್ನು ಎಸೆಯುತ್ತಿದ್ದಾರೆ" ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಟ್ವೀಟ್ ಮಾಡಿದ್ದಾರೆ.
ಪೂರ್ವ ದೆಹಲಿ ನಗರ ಸಭಾ (ಇ ಎಂ ಡಿ ಸಿ) ಸಿಬ್ಬಂದಿಗಳು ಧರಣಿ ನಡೆಸಿರುವುದರಿಂದ ಆ ಪ್ರದೇಶಗಳಲ್ಲೆಲ್ಲಾ ಕಸದ ರಾಶಿ ತುಂಬಿ ತುಳುಕುತ್ತಿರುವ ಹಿನ್ನಲೆಯಲ್ಲಿ ಕೇಜ್ರಿವಾಲ್ ಈ ಆರೋಪಗಳನ್ನು ಮಾಡಿದ್ದಾರೆ.
ವಾರಾಂತ್ಯದಲ್ಲಿ ಕೇಜ್ರಿವಾಲ್ ಮುಂದಾಳತ್ವದ ಸರ್ಕಾರ ಇ ಎಂ ಡಿ ಸಿ ಬ್ಯಾಂಕ್ ಖಾತೆಗೆ ೧೧೯ ಕೋಟಿ ರೂ ವರ್ಗಾಯಿಸಿದೆ. ದೆಹಲಿ ನಗರಸಭೆಯ ಮೂರೂ ಘಟಕಗಳು ಬಿಜೆಪಿ ಪಕ್ಷದ ಕೈವಶದಲ್ಲಿವೆ.
೨೦೧೬-೧೭ ರಲ್ಲಿ ೬೦೯ ಕೋಟಿ ಮತ್ತು ೨೦೧೫-೧೬ ರಲ್ಲಿ ೭೦೨ ಕೋಟಿ ರೂ ಹಣವನ್ನು ನಗರಸಭೆಯ ಸಿಬ್ಬಂದಿಗಳಿಗೆ ಬಿಡುಗಡೆ ಮಾಡಿರುವುದಾಗಿ ದೆಹಲಿ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.
ದೆಹಲಿಯಲ್ಲಿ ಎಎಪಿ ಆಡಳಿತ ಅಧಿಕಾರಕ್ಕೆ ಬರುವುದಕ್ಕೂ ಮುಂಚಿತವಾಗಿ, ೨೦೧೪-೨೦೧೫ ರಲ್ಲಿ ೪೪೧ ಕೋಟಿ, ೨೦೧೩-೧೪ ರಲ್ಲಿ ೪೧೬ ಕೋಟಿ ಮತ್ತು ೨೦೧೨-೧೩ ರಲ್ಲಿ ೩೯೯ ಕೋಟಿ ಮಾತ್ರ ಬಿಡುಗಡೆಯಾಗಿತ್ತು.