ಸ್ಕಾರ್ಪೀನ್ ಶ್ರೇಣಿಯ 2ನೇ ಜಲಾಂತರ್ಗಾಮಿ ಖಂಡೇರಿ ಲೋಕಾರ್ಪಣೆ
ಮುಂಬೈ: ಭಾರತದ ಅತ್ಯಾಧುನಿಕ ಜಲಾಂತರ್ಗಾಮಿ ಖಂಡೇರಿ ಗುರುವಾರ ಲೋಕಾರ್ಪಣೆಯಾಗಿದ್ದು, ಮುಂಬೈನ ಡಾಕ್ ಯಾರ್ಡ್ ನಲ್ಲಿ ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಷ್ ಭಮ್ರೆ ಅವರು ನೌಕೆಯನ್ನು ಲೋಕಾರ್ಪಣೆಗೊಳಿಸಿದರು.
ಮಡಗಾಂವ್ ಡಾಕ್ ಶಿಪ್ ಬಿಲ್ಟರ್ಸ್ ಲಿಮಿಟೆಡ್ (ಎಂಡಿಎ) ಸಂಸ್ಥೆ ಜಲಾಂತರ್ಗಾಮಿ ಖಂಡೇರಿಯನ್ನು ತಯಾರಿಸಿದ್ದು, ಇದು ಸ್ಕಾರ್ಪೀನ್ ಶ್ರೇಣಿಯ 2ನೇ ನೌಕೆಯಾಗಿದೆ. ಖಂಡೇರಿ ಅತ್ಯಾಧುನಿಕ ನೌಕೆಯಾಗಿದ್ದು, ನೌಕೆಯಲ್ಲಿರುವ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆ ಯಾವುದೇ ರೀತಿಯ ಬಾಹ್ಯ ಬೆದರಿಕೆಗಳನ್ನು ಹೊಡೆದುರುಳಿಸಬಲ್ಲದು. ನೌಕೆಗೆ ಅತ್ಯಾಧುನಿಕ ಕ್ಷಿಪಣಿಗಳನ್ನು ನಿಯೋಜಿಸುವ ಯೋಜನೆ ಇದ್ದು, ನೌಕೆಯಲ್ಲಿರುವ ರಾಡಾರ್ ವ್ಯವಸ್ಥೆಯಿಂದಾಗಿ ಶತ್ರುಪಾಳಯದ ನೌಕೆಗಳ ಮೇಲೆ ನಿಖರವಾಗಿ ದಾಳಿ ಮಾಡಬಹುದಾಗಿದೆ.
ಖಂಡೇರಿ ನೌಕೆ ಜಲಂತರ್ಗಾಮಿ ಕ್ಷಿಪಣಿ ದಾಳಿ ನಿರೋಧಕ ವ್ಯವಸ್ಥೆಯನ್ನು ಹೊಂದಿದ್ದು, ತನ್ನತ್ತ ಶತ್ರುಪಾಳಯದ ನೌಕೆಗಳು ಹಾರಿಸಿದ ಯಾವುದೇ ಕ್ಷಿಪಣಿಯನ್ನೂ ಮೊದಲೇ ಗುರುತಿಸಿ ಅದನ್ನು ಮಾರ್ಗ ಮಧ್ಯೆಯೇ ಹೊಡೆದುರುಳಿಸುವ ಸಾಮರ್ಥ್ಯ ಖಂಡೇರಿಗಿದೆ. ಇನ್ನು ನೌಕೆಯಲ್ಲಿರುವ ಅತ್ಯಾಧುನಿಕ ಸಂಪರ್ಕ ಸಾಧನಗಳು ಪ್ರತೀಕೂಲ ವಾತಾವರಣ ಸಂದರ್ಭದಲ್ಲಿ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದಾಗಿದೆ.
2017 ಡಿಸೆಂಬರ್ ತಿಂಗಳವರೆಗೂ ಖಂಡೇರಿ ಜಲಾಂತರ್ಗಾಮಿ ನೌಕೆಯನ್ನು ವಿವಿಧ ಪರೀಕ್ಷೆಗೆ ಒಳಪಡಿಸಲಿದ್ದು, ಪರೀಕ್ಷೆಗಳಲ್ಲಿ ನೌಕೆ ಯಶಸ್ಸು ಸಾಧಿಸಿದರೆ ಬಳಿಕ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ