ತಾರಕಕ್ಕೇರಿದ ಜಲ್ಲಿಕಟ್ಟು ವಿವಾದ; ಇಂದು ತಮಿಳುನಾಡು ಬಂದ್!

ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಮೇಲೆ ಹೇರಲಾಗಿರುವ ನಿರ್ಭಂಧವನ್ನು ತೆರವುಗೊಳಿಸುವಂತೆ ಕಳೆದ 3 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ವಿವಿಧ ತಮಿಳುಪರ ಸಂಘಟನೆಗಳು ತಮಿಳುನಾಡು ಬಂದ್ ಗೆ ಕರೆ ನೀಡಿವೆ.
ಮರೀನಾ ಬೀಚ್ ನಲ್ಲಿ ಪ್ರತಿಭಟನೆ
ಮರೀನಾ ಬೀಚ್ ನಲ್ಲಿ ಪ್ರತಿಭಟನೆ

ಚೆನ್ನೈ: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಮೇಲೆ ಹೇರಲಾಗಿರುವ ನಿರ್ಭಂಧವನ್ನು ತೆರವುಗೊಳಿಸುವಂತೆ ಕಳೆದ 3 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ವಿವಿಧ ತಮಿಳುಪರ  ಸಂಘಟನೆಗಳು ತಮಿಳುನಾಡು ಬಂದ್ ಗೆ ಕರೆ ನೀಡಿವೆ.

ತಮಿಳುನಾಡು ಬಂದ್ ಗೆ ಈಗಾಗಲೇ ಸಾಕಷ್ಟು ಸಂಘಟನೆಗಳು ಬೆಂಬಲ ನೀಡಿದ್ದು, ಆಟೋ, ಟ್ಯಾಕ್ಸಿ ಮತ್ತು ಲಾರಿ ಚಾಲಕರ ಸಂಘಗಳು ಬೆಂಬಲ ನೀಡಿ ಬಂದ್ ಆಚರಿಸುತ್ತಿವೆ. ಇನ್ನು ಬಂದ್ ಗೆ ತಮಿಳು ಚಿತ್ರರಂಗ ಕೂಡ ಬೆಂಬಲ  ನೀಡಿದ್ದು, ಜಲ್ಲಿಕಟ್ಟು ಬೆಂಬಲಿಸಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಚೆನ್ನೈನ ಮರೀನಾ ಬೀಚ್ ಪ್ರತಿಭಟನೆಯಲ್ಲಿ ಇಂದು ತಮಿಳು ನಟರು ಭಾಗಿಯಾಗಲಿದ್ದಾರೆ. ಈ ಹಿಂದೆ ತಮಿಳು ನಟರ ಸಂಘ  ನಾಡಿಗರ್ ಸಂಘಮ್ ಘೋಷಣೆ ಮಾಡಿದಂತೆ ಇಂದು ತಮಿಳು ಚಿತ್ರರಂಗ ಜಲ್ಲಿಕಟ್ಟು ಆಚರಣೆಯನ್ನು ಬೆಂಬಲಿಸಿ ಮತ್ತು ಪೇಟಾ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ  ಆರಂಭಿಸಲಿದ್ದಾರೆ.

ಇನ್ನು ವಿದ್ಯಾರ್ಥಿಗಳ ಹಾಗೂ ತಮಿಳುಪರ ಸಂಘಟನೆಗಳ ಪ್ರತಿಭಟನೆಗೆ ತಮಿಳುನಟರು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ತಮಿಳಿನ ಕೆಲ ಕಿರುತೆರೆ ನಟನಟಿಯರೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ವಿವಿಧ ವಿದ್ಯಾರ್ಥಿ  ಸಂಘಟನೆಗಳು ಹಾಗೂ ತಮಿಳುಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಕೇಂದ್ರ ಸರ್ಕಾರ ಹಾಗೂ ಪೇಟಾ ಸಂಘಟನೆಯ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದಾರೆ.

ದಿನಗಳೆದಂತೆ ಪ್ರತಿಭಟನೆ ವ್ಯಾಪಕ ಸ್ವರೂಪ ಪಡೆಯುತ್ತಿದ್ದು,  ಮಧುರೈ, ಕೊಯಮತ್ತೂರು, ತಿರುಚಿರಪಲ್ಲಿ ಸೇರಿದಂತೆ ಇಡೀ ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಚೆನ್ನೈನ ಮರೀನಾ ಬೀಚ್ ಪ್ರತಿಭಟನೆಯ  ಕೇಂದ್ರ ಬಿಂದುವಾಗಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರು ಕಳೆದೆರಡು ದಿನಗಳಿಂದ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com