ಬೆಂಗಳೂರು: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಜನವರಿ 27ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಕರ್ನಾಕಟ ಹೈಕೋರ್ಟ್ ಶುಕ್ರವಾರ ಆದೇಶ ನೀಡಿದೆ.
ಕಿಂಗ್ ಫಿಷರ್ ಏರ್ ಲೈನ್ಸ್ ಗೆ ಸಾಲ ನೀಡಿದ್ದ ಎಸ್ ಬಿಐ ನೇತೃತ್ವದ ಬ್ಯಾಂಕ್ ಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಪಟೇಲ್ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ಮೂರನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಮದ್ಯದ ದೊರೆಗೆ ಆದೇಶ ನೀಡಿದೆ.
ವಿಜಯ್ ಮಲ್ಯ ವಿರುದ್ಧದ ಆರೋಪಗಳಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದ್ದು, ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಖುದ್ದು ಹಾಜರಾಗಲೇಬೇಕು ಎಂದು ಕೋರ್ಟ್ ಆದೇಶ ನೀಡಿದೆ.
ಈ ಹಿಂದಿನ ಆದೇಶದಂತೆ ವಿಜಯ್ ಮಲ್ಯ ಅವರು ಜನವರಿ 19ರಂದು ಕೋರ್ಟ್ ನಲ್ಲಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಆ ದಿನ ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಹಿಂದಿನ ಆದೇಶ ಪರಿಷ್ಕರಿಸಿ ಜ.27ರಂದು ಬರುವಂತೆ ಸೂಚನೆ ನೀಡಿದೆ.
ವಿಜಯ್ ಮಲ್ಯ ತನ್ನ ಆಸ್ತಿಯನ್ನು ಪರಭಾರೆ ಮಾಡುವುದಿಲ್ಲ ಎಂದು ಕೋರ್ಟ್ ಗೆ ವಾಗ್ದಾನ ನೀಡಿ, ಅದನ್ನು ಉಲ್ಲಂಘಿಸಿ ಮಾರಾಟ ಮಾಡಿದ್ದಾರೆ ಎಂದು ಬ್ಯಾಂಕ್ ಗಳ ಒಕ್ಕೂಟ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿವೆ.