ನವದೆಹಲಿ: ಯುನೈಟೆಡ್ ಸ್ಪಿರಿಟ್ಸ್ ಮೂಲಕ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಷೇರು ಮಾರುಕಟ್ಟೆಗೆ ನಿರ್ಬಂಧ ವಿಧಿಸಿರುವ ಸೆಬಿ ವಿರುದ್ಧ ಮದ್ಯದ ದೊರೆ ವಿಜಯ್ ಮಲ್ಯ ಅವರು ವಾಗ್ದಾಳಿ ನಡೆಸಿದ್ದು, ಸೆಬಿ ಆರೋಪದ ಆಧಾರ ರಹಿತ ಎಂದು ಗುರುವಾರ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಲ್ಯ, ಕಿಂಗ್ ಫಿಶರ್ ಗೆ ಏರ್ ಲೈನ್ಸ್ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪದ ಒಂದು 'ಜೋಕ್' ಎಂದಿದ್ದಾರೆ. ಅಲ್ಲದೆ ಅದಕ್ಕೆ ಯಾವುದೇ ಕಾನೂನಿನ ಆಧಾರ ಇಲ್ಲ ಎಂದಿದ್ದಾರೆ.
ಒಂದು ಕಡೆ ಕಿಂಗ್ ಫಿಶರ್ ಏರ್ ಲೈನ್ಸ್ ನಿಂದ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸಿಬಿಐ ಆರೋಪ ಮಾಡುತ್ತಿದೆ. ಮತ್ತೊಂದು ಕಡೆ ಯುಎಸ್ ಎಲ್ ನಿಂದ ಕಿಂಗ್ ಫಿಶರ್ ಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸೆಬಿ ಆರೋಪ ಮಾಡುತ್ತಿದೆ. ಇದೆಂಥಾ ತಮಾಷೆ? ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.
ಯುಎಸ್ಎಲ್ ನಿಂದ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪದ ಆಧಾರ ರಹಿತ. ಯುಎಸ್ಎಲ್ ಅಕೌಂಟ್ ಗಳು ಹಿರಿಯ ಆಡಿಟರ್ ಗಳಿಂದ ಒಪ್ಪಿಗೆ ಪಡೆದಿವೆ ಎಂದು ಮಲ್ಯ ಹೇಳಿದ್ದಾರೆ.
ನಿನ್ನೆಯಷ್ಟೆ ಸೆಬಿ ಷೇರು ಮಾರುಕಟ್ಟೆಯಿಂದ ವಿಜಯ್ ಮಲ್ಯ ಅವರಿಗೆ ನಿಷೇಧ ಹೇರಿತ್ತು.