ನವದೆಹಲಿ: ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ತಮ್ಮ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸಾಲ ಪಡೆಯಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಹಾಯ ಮಾಡಿದ್ದಾರೆ ಎಂದು ಸೋಮವಾರ ಬಿಜೆಪಿ ಆರೋಪಿಸಿದೆ.
ಸಾಲ ಪಡೆಯಲು ಸಹಾಯ ಕೋರಿ ವಿಜಯ್ ಮಲ್ಯ ಅವರು ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಬಳಿಕ ಸಿಂಗ್ ಅವರ ಒತ್ತಡದಿಂದಲೇ ಬ್ಯಾಂಕ್ ಗಳು ಜಾಮೀನಿಲ್ಲದೆ ದೊಡ್ಡ ಮೊತ್ತದ ಸಾಲ ನೀಡಿವೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಆರೋಪಿಸಿದ್ದಾರೆ.
ಇಂದು ವಿಜಯ್ ಮಲ್ಯ ಅವರು ಮಾಜಿ ಪ್ರಧಾನಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಬಹಿರಂಗಪಡಿಸಿದ ಪಾತ್ರ, ಬರೀ ಬ್ಯಾಂಕ್ ಮಾತ್ರವಲ್ಲ ಮನಮೋಹನ್ ಸಿಂಗ್ ಅವರು ಆದಾಯ ತೆರಿಗೆ ಇಲಾಖೆ ಮೇಲೂ ಒತ್ತಡ ಹೇರಿದ್ದರಿಂದ ವಿಜಯ್ ಮಲ್ಯ ಖಾತೆಗಳಿಗೆ ಸಹಾನುಭೂತಿ ತೋರಿಸಲಾಗಿದೆ ಎಂದು ದೂರಿದ್ದಾರೆ.
ಕಿಂಗ್ ಫಿಶರ್ ಏರ್ ಲೈನ್ಸ್ ನಷ್ಟದಲ್ಲಿದ್ದರೂ 9 ಸಾವಿರ ಕೋಟಿ ರುಪಾಯಿ ಸಾಲ ನೀಡಿದ್ದು ಹೇಗೆ? ಎಂದು ಪ್ರಶ್ನಿಸಿರುವ ಬಿಜೆಪಿ ವಕ್ತಾರ, ಇದರ ಹಿಂದೆ ಕಾಣದ ಕೈಗಳ ಕೆಲಸ ಇದೆ ಎಂದಿದ್ದಾರೆ.
ವಿಜಯ್ ಮಲ್ಯ ಸಾಲದ ಹಿಂದೆ ಇರುವ ಕೈ ಯಾವುದು ಎಂಬುದರ ಬಗ್ಗೆ ನಮ್ಮ ಬಳಿ ಕೆಲವು ಇ-ಮೇಲ್ ಹಾಗೂ ಪತ್ರಗಳಿವೆ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.