ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ಸೈನಿಕರ ಗುಂಡಿನ ದಾಳಿ; ಓರ್ವ ಸಾವು, ಮತ್ತೊಬ್ಬನಿಗೆ ಗಾಯ

ಭಾರತದ ಸಮುದ್ರ ಗಡಿಯಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರ ಮೇಲೆ ಶ್ರೀಲಂಕಾ ನೌಕಾದಳದ ಸೈನಿಕರು ದೌರ್ಜನ್ಯ ಮೆರೆದಿದ್ದು, ಏಕಾಏಕಿ ಗುಂಡಿನ ದಾಳಿ ನಡೆಸುವ ಮೂಲಕ ಓರ್ವ ಮೀನುಗಾರನ ಸಾವಿಗೆ ಕಾರಣವಾಗಿದ್ದಾರೆ.
ಲಂಕಾಸೇನೆಯ ಗುಂಡೇಟಿಗೆ ಬಲಿಯಾದ ಮೀನುಗಾರ
ಲಂಕಾಸೇನೆಯ ಗುಂಡೇಟಿಗೆ ಬಲಿಯಾದ ಮೀನುಗಾರ

ರಾಮೇಶ್ವರಂ: ಭಾರತೀಯ ಸಮುದ್ರ ಗಡಿಯಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರ ಮೇಲೆ ಶ್ರೀಲಂಕಾ ನೌಕಾದಳದ ಸೈನಿಕರು ದೌರ್ಜನ್ಯ ಮೆರೆದಿದ್ದು, ಏಕಾಏಕಿ ಗುಂಡಿನ ದಾಳಿ ನಡೆಸುವ ಮೂಲಕ ಓರ್ವ ಮೀನುಗಾರನ ಸಾವಿಗೆ  ಕಾರಣವಾಗಿದ್ದಾರೆ.

ತಮಿಳುನಾಡಿನ ರಾಮೇಶ್ವರಂ ಮೂಲದ 22 ವರ್ಷದ ಬ್ರಿಡ್ಗೋ ಎಂಬ ಮೀನುಗಾರನ ಮೇಲೆ ಲಂಕಾ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಓರ್ವ ಮೀನುಗಾರನ ಕುತ್ತಿಗೆಗೆ ಗುಂಡು ತಗುಲಿದೆ. ಪರಿಣಾಮ ಆತ ಸ್ಥಳದಲ್ಲಿಯೇ  ಸಾವನ್ನಪ್ಪಿದ್ದು, ಮತ್ತೋರ್ವ ಮೀನುಗಾರ ಸರವಣನ್ ಎಂಬಾತನ ಕಾಲಿಗೂ ಗುಂಡೇಟು ತಗುಲಿದೆ. ಲಂಕಾ ಸೈನಿಕರ ದಿಢೀರ್ ದಾಳಿಯಿಂದಾಗಿ ರಾಮೇಶ್ವರಂ ಉದ್ವಿಗ್ನಗೊಂಡಿದ್ದು, ಲಂಕಾ ಸೈನಿಕರ ಕೃತ್ಯಕ್ಕೆ  ತಮಿಳುನಾಡಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಸ್ಥಳೀಯ ಮೀನುಗಾರಿಕಾ ಅಧಿಕಾರಿಗಳು ತಿಳಿಸಿರುವಂತೆ ರಾಮೇಶ್ವರಂ ಸಮೀಪದಲ್ಲಿರುವ ಕಚ್ಚಾತೀವು ದ್ವೀಪ ಪ್ರದೇಶದ ಭಾರತದ ಸಮುದ್ರಗಡಿಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಮೀನುಗಾರರು ಮೀನು ಹಿಡಿಯುತ್ತಿದ್ದರು. ಈ  ವೇಳೆ ಲಂಕಾ ಸೈನಿಕರು ದಿಢೀರ್ ದಾಳಿ ಮಾಡಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಕನಿಷ್ಠ ಪಕ್ಷ ಎಚ್ಚರಿಕೆಯಾಗಿ ಗಾಳಿಯಲ್ಲಿ ಒಂದು ಗುಂಡೂ ಕೂಡ ಹಾರಿಸಿಲ್ಲ. ಮೀನುಗಾರಿಕಾ ಪ್ರದೇಶಕ್ಕೆ ನುಗ್ಗಿದ್ದಲ್ಲದೇ ಮೀನುಗಾರರನ್ನು  ಕೊಂದು ಹಾಕಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸಂಬಂಧ ರಾಮೇಶ್ವರಂನ ಜೆಟ್ಟಿ ಪೊಲೀಸ್ ನಿಲ್ದಾಣದಲ್ಲಿ ದೂರು ದಾಖಲಾಗಿದ್ದು, ಸ್ಥಳೀಯ ಅಧಿಕಾರಿಗಳು ಪ್ರಧಾನಿ ಕಚೇರಿ ಹಾಗೂ ವಿದೇಶಾಂಗ ಇಲಾಖೆಗೆ ಪ್ರಕರಣದ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com