ಗೋವಾ ಸರ್ಕಾರ ರಚನೆ; ಕಾಂಗ್ರೆಸ್ ಟೀಕೆ ಅತಿಯಾಯ್ತು: ಅರುಣ್ ಜೇಟ್ಲಿ

ಗೋವಾದಲ್ಲಿ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಆರೋಪಗಳ....
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Updated on: 
ನವದೆಹಲಿ: ಗೋವಾದಲ್ಲಿ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಆರೋಪಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ವಿತ್ತ ಹಾಗೂ ರಕ್ಷಣಾ ಖಾತೆ ಸತಿವ ಅರುಣ್ ಜೇಟ್ಲಿ ಅವರು, ಕಾಂಗ್ರೆಸ್ ಟೀಕೆ ಅತಿಯಾಯ್ತು ಎಂದಿದ್ದಾರೆ. 
ಕಾಂಗ್ರೆಸ್ ಆರೋಪಗಳಿಗೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ಅರುಣ್ ಜೇಟ್ಲಿ, ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಚುನಾವಣೋತ್ತರ ಮೈತ್ರಿಗೆ ಅವಕಾಶ ಇದೆ. ಈ ಅವಕಾಶವನ್ನು ಬಳಸಿಕೊಂಡು ಬಿಜೆಪಿ 21 ಶಾಸಕರ ಬೆಂಬಲದೊಂದಿಗೆ ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದೆ ಎಂದಿದ್ದಾರೆ.
ಇದೇ ವೇಳೆ ಬಿಜೆಪಿಯ ಮನೋಹರ್ ಪರಿಕ್ಕರ್ ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ ಅವರನ್ನು ಅರುಣ್ ಜೇಟ್ಲಿ ಸಮರ್ಥಿಸಿಕೊಂಡಿದ್ದು, ‘ಚುನಾವಣಾ ನಂತರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವಲ್ಲಿ ಯಾವುದೇ ತಪ್ಪಿಲ್ಲ. 2005ರಲ್ಲಿ ಜಾರ್ಖಂಡ್‌ನಲ್ಲಿ ಬಿಜೆಪಿ 30 ಸ್ಥಾನಗಳನ್ನು ಗೆದ್ದಿತ್ತು ಆದರೆ ಶಿಬು ಸೊರೆನ್‌ ನೇತೃತ್ವದ ಪಕ್ಷ ಕೇವಲ 17 ಸ್ಥಾನಗಳಲ್ಲಿ ಜಯಗಳಿಸಿದ್ದರು. ಹೀಗಿದ್ದರೂ ಸರ್ಕಾರ ರಚನೆಗೆ ಸೊರೆನ್‌ ಅವರಿಗೆ ಅವಕಾಶ ನೀಡಲಾಗಿತ್ತು ಎಂದು ವಿವರಿಸಿದ್ದಾರೆ.
ಕಾಂಗ್ರೆಸ್‌ ಪಕ್ಷ ವಿನಾಕಾರಣ ಆರೋಪ ಮಾಡುತ್ತಿದೆ. ಗೋವಾದಲ್ಲಿ ಸರ್ಕಾರ ರಚನೆಗೆ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬ ವಾದದಲ್ಲಿ ಅರ್ಥವಿಲ್ಲ. ಇದನ್ನು ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಒಯ್ದಿದ್ದು ಸಮಂಜಸವಲ್ಲ ಎಂದು ಬರೆದಿದ್ದಾರೆ. ಲೋಕಸಭೆಯಲ್ಲಿ ವಿಷಯ ಚರ್ಚಿಸುವುದನ್ನು ಬಿಟ್ಟು ನೇರ ಕೋರ್ಟಿನ ಮೊರೆ ಹೋಗಿರುವುದು ಸರಿಯಲ್ಲ ಎಂದಿದ್ದಾರೆ.
2002ರಲ್ಲಿ ಜಮ್ಮು ಕಾಶ್ಮೀರದಲ್ಲಿ, 2013ರಲ್ಲಿ ದೆಹಲಿಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ದೊಡ್ಡ ಪಕ್ಷದ ಹೊರತಾಗಿ ಶಕ್ತವಿರುವ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡಲಾಗಿತ್ತು. ಬಿಜೆಪಿ ಸಂವಿಧಾನದ ಕೊಲೆ ಮಾಡುತ್ತಿಲ್ಲ ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ರಚನೆಯ ಉದ್ದೇಶ ಕಾಂಗ್ರೆಸ್‌ಗಿದ್ದರೆ ಅವರೇ ಮೊದಲು ಸರ್ಕಾರ ರಚನೆಗೆ ಮುಂದಾಗಬೇಕಿತ್ತು. ಈವರೆಗೂ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ ಎಂದು ಜೇಟ್ಲಿ ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com