ಜಾದವ್ ಪ್ರಕರಣವನ್ನು ಅಂತಾರಾಷ್ಟ್ರೀಯ ಕೋರ್ಟ್ ಗೆ ತೆಗೆದುಕೊಂಡು ಹೋಗಿದ್ದು ಭಾರತದ ದೊಡ್ಡ ಪ್ರಮಾದ: ಕಾಟ್ಜು

ಭಾರತದ ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಅಂತಾರಾಷ್ಚ್ರೀಯ ನ್ಯಾಯಾಲಯ ನೀಡಿದ ತೀರ್ಪಿನಿಂದ ಇಡೀ ದೇಶ ಸಂತಸ ಪಡುತ್ತಿರುವ ಹೊತ್ತಿನಲ್ಲೇ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ಗಂಭೀರ ವಿಚಾರವೊಂದರ ಕುರಿತು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದ ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಅಂತಾರಾಷ್ಚ್ರೀಯ ನ್ಯಾಯಾಲಯ ನೀಡಿದ ತೀರ್ಪಿನಿಂದ ಇಡೀ ದೇಶ ಸಂತಸ ಪಡುತ್ತಿರುವ ಹೊತ್ತಿನಲ್ಲೇ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು  ಗಂಭೀರ ವಿಚಾರವೊಂದರ ಕುರಿತು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜಾದವ್ ಪ್ರಕರಣದಲ್ಲಿ ಭಾರತಕ್ಕೆ ಸಿಕ್ಕ ಗೆಲುವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕಿದ ಬಹುದೊಡ್ಡ ಜಯ ಹಾಗೂ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆ ಎಂಬ ಮಾತುಗಳೂ ಕೇಳಿ ಬರುತ್ತಿರುವ ಹೊತ್ತಿನಲ್ಲೇ ಈ ಇಡೀ ಬೆಳವಣಿಗೆಯ ಕುರಿತು  ನಿವೃತ್ತ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಅವರು ತದ್ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವತಃ ಕಾನೂನು ತಜ್ಞ ಹಾಗೂ ನಿವೃತ್ತ ನ್ಯಾಯಾಧೀಶರಾಗಿರುವ ಕಾಟ್ಜು ಅವರು ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಭಾರತದಿಂದ  ದೊಡ್ಡ ಪ್ರಮಾದವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯಾ. ಕಾಟ್ಜು ಅವರ ಪ್ರಕಾರ  ಜಾಧವ್ ವಿಷಯದಲ್ಲಿ  ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಲೇರಿದ್ದೇ ಬಹುದೊಡ್ಡ ಪ್ರಮಾದವಂತೆ. ಉಭಯ ದೇಶಗಳ ನಡುವಿನ ಸಮಸ್ಯೆಯನ್ನು ಭಾರತ ಅಂತಾರಾಷ್ಟ್ರೀಯ  ನ್ಯಾಯಾಲಯಕ್ಕೆ ಕೊಂಡೊಯ್ಯುವ ಮೂಲಕ ಪಾಕಿಸ್ತಾನ ಹೆಣೆದ ಜಾಲಕ್ಕೆ ಬಿದ್ದಿದೆ ಎಂದು ಕಾಟ್ಜು ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ರಾತ್ರಿ ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಬರೆದಿರುವ ನ್ಯಾ. ಕಾಟ್ಜು ಅವರು "ಜಾದವ್ ಪ್ರಕರಣಗ ಮೂಲಕ ಭಾರತ ಉಭಯ ದೇಶಗಳ ನಡುವಿನ ವಿವಾದದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಬಹುದು  ಎಂದು ಒಪ್ಪಿಕೊಂಡಂತಾಗಿದೆ. ಜಾದವ್ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಹಿನ್ನಡೆಯಾಗಿರಬಹುದು. ಆದರೆ ಪಾಕಿಸ್ತಾನ ಜಾದವ್ ವಿಚಾರದಲ್ಲಿ ಬೇಕೆಂದೇ ಹೆಚ್ಚು ತಕರಾರಿಲ್ಲದೆ ಸೊಲೊಪ್ಪಿಕೊಂಡಿದೆ. ಇನ್ನು ಆ ದೇಶ ಕಾಶ್ಮೀರ ಸಹಿತ  ಭಾರತ-ಪಾಕಿಸ್ತಾನ ನಡುವಿನ ಹಲವು ಸೂಕ್ಷ್ಮ ವಿಷಯಗಳನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಲಿದೆ. ಆಗ ಅದನ್ನು ಆಕ್ಷೇಪಿಸುವ ಅಧಿಕಾರವನ್ನು ಭಾರತ ಈಗ ಕಳೆದುಕೊಂಡಿದೆ. ಒಬ್ಬನ ಪ್ರಾಣ ಉಳಿಸಲು ಹೋಗಿ  ಭಾರತ ದೊಡ್ಡ ಎಡವಟ್ಟು ಮಾಡಿಕೊಂಡಿದೆ. ಈ ಮೂಲಕ ನಾವು ಪಾಕಿಸ್ತಾನಕ್ಕೆ ದೊಡ್ಡ ಅವಕಾಶ ಮಾಡಿ ಕೊಟ್ಟಂತಾಗಿದೆ ಎಂದು ಕಾಟ್ಜು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com