ವೀಕೆಂಡ್ ಮಸ್ತಿಗೆ ಪ್ರಶಸ್ತ ಜಾಗ ಕಾವೇರಿ ವನ್ಯಧಾಮ

ಕರ್ನಾಟಕದ ಹೆಮ್ಮೆಯ ಪ್ರವಾಸಿ ಕೇಂದ್ರಗಳಲ್ಲಿ ಕಾವೇರಿ ವನ್ಯಧಾಮ ಕೂಡ ಒಂದು. ಪ್ರಕೃತಿ ಪ್ರಿಯರ ಪಾಲಿಗೆ ಕಾವೇರಿ ವನ್ಯಧಾಮ ಸ್ವರ್ಗದಂತಿದ್ದು, ದೇಶದ ಅತೀ ಅಪರೂಪದ ಪ್ರಾಣಿ ಮತ್ತು ಪಕ್ಷಿ ಪ್ರಬೇಧಗಳು ಇಲ್ಲಿ ನಮಗೆ ಕಾಣಸಿಗುತ್ತವೆ...
ಕಾವೇರಿ ವನ್ಯಧಾಮ (ಸಂಗ್ರಹ ಚಿತ್ರ)
ಕಾವೇರಿ ವನ್ಯಧಾಮ (ಸಂಗ್ರಹ ಚಿತ್ರ)

ಕರ್ನಾಟಕದ ಹೆಮ್ಮೆಯ ಪ್ರವಾಸಿ ಕೇಂದ್ರಗಳಲ್ಲಿ ಕಾವೇರಿ ವನ್ಯಧಾಮ ಕೂಡ ಒಂದು. ಪ್ರಕೃತಿ ಪ್ರಿಯರ ಪಾಲಿಗೆ ಕಾವೇರಿ ವನ್ಯಧಾಮ ಸ್ವರ್ಗದಂತಿದ್ದು, ದೇಶದ ಅತೀ ಅಪರೂಪದ ಪ್ರಾಣಿ ಮತ್ತು  ಪಕ್ಷಿ ಪ್ರಬೇಧಗಳು ಇಲ್ಲಿ ನಮಗೆ ಕಾಣಸಿಗುತ್ತವೆ. ಕಾವೇರಿ ವನ್ಯಧಾಮ ಬೆಂಗಳೂರು ಮತ್ತು ಮೈಸೂರು ಹೊರವಲಯದಲ್ಲಿ ಸುಮಾರು 100 ಕಿ.ಮೀ ವ್ಯಾಪ್ತಿಯಲ್ಲಿದ್ದು, ಕಾವೇರಿ ವನ್ಯಧಾಮ  ಕನಕಪುರದಿಂದ ಆರಂಭಗೊಂಡು, ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನವರೆವಿಗೂ ಹರಡಿಕೊಂಡಿದೆ.

ಇಲ್ಲಿನ ಅಪೂರ್ವ ಅರಣ್ಯ ಸಂಪತ್ತನ್ನು ಸಂರಕ್ಷಿಸಲು ರಾಜ್ಯ ಸರ್ಕಾರ 1987 ಜನವರಿ 14ರಂದು ಈ ಪ್ರದೇಶವನ್ನು ವನ್ಯಜೀವಿ ಧಾಮವನ್ನಾಗಿ ಘೋಷಣೆ ಮಾಡಿತು. ಪ್ರಮುಖವಾಗಿ ಕಾವೇರಿ  ವನ್ಯಧಾಮ ಆನೆಗಳ ಸಂಚಾರಕ್ಕೆ ಮುಖ್ಯ ಕೊಂಡಿಯಾಗಿರುವ ಕಣಿಯನಪುರ ಆನೆ ಕಾರಿಡಾರ್ ಇರುವುದು ಕೂಡ ಇದೇ ಅಭಯಾರಣ್ಯದಲ್ಲೇ ಎಂಬುದು ವಿಶೇಷ. ಆನೆಗಳ ಆಹಾರ ವ್ಯವಸ್ಥೆಗೆ  ಕಾವೇರಿ ವನ್ಯಧಾಮದಲ್ಲಿ ಸಾಕಷ್ಟು ಪೂರಕ ವಾತಾವರಣವಿದ್ದು, ಇದೇ ಕಾರಣಕ್ಕಾಗಿ ಸಾತಷ್ಟು ಸಂಖ್ಯೆಯಲ್ಲಿ ಆನೆಗಳು ಇಲ್ಲಿ ಜೀವಿಸುತ್ತವೆ. ಆಹಾರಗಳನ್ನು ಅರಸುತ್ತಾ ಮತ್ತು  ಸಂತಾನೋತ್ಪತ್ತಿಗಾಗಿ ಆನೆಗಳು ಇಲ್ಲಿಂದ ಬಂಡೀಪುರ, ಮಲೆಮಹದೇಶ್ವರ ಬೆಟ್ಟ, ಸತ್ಯಮಂಗಲ ಅರಣ್ಯ ಪ್ರದೇಶ ಮತ್ತು ಬಿಳಿಗಿರಿ ರಂಗನ ಬೆಟ್ಟದ  ಅರಣ್ಯ ಪ್ರದೇಶಗಳಿಗೆ ಹೋಗಿಬಂದು  ಮಾಡುತ್ತಿರುತ್ತವೆ.

ಈ ಅರಣ್ಯದ ಮಧ್ಯದಲ್ಲಿಯೇ ಕಾವೇರಿ ನದಿ ಹರಿಯುವುದರಿಂದ ಇಲ್ಲಿನ ವನ್ಯಜೀವಿಗಳಿಗೆ ನೀರಿನ ಕೊರತೆ ಅಷ್ಟಾಗಿ ಕಾಣುವುದಿಲ್ಲ. ಇನ್ನು ಈ ನದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೊಸಳೆಗಳಿದ್ದು,  ನಾನಾ ಜಾತಿಯ ಅಪರೂಪದ ಆಮೆಗಳು, ಮಾಷಿರ್ ಜಾತಿಗೆ ಸೇರಿದ ಅಪರೂಪದ ಮೀನುಗಳು ಕಂಡುಬರುತ್ತವೆ. ಆನೆಗಳು, ಹುಲಿಗಳು, ಚಿರತೆ, ಜಿಂಕೆ, ಕಡವೆ, ಅಪರೂಪದ ಮಲಬಾರ್  ಅಳಿಲು, ಮುಳ್ಳುಹಂದಿ ಸೇರಿದಂತೆ ಹೆಬ್ಬಾವುಗಳ ದೊಡ್ಡ ಸಂತತಿಯೇ ಇಲ್ಲಿದೆ. ಕಾವೇರಿ ವನ್ಯಧಾಮದಲ್ಲಿ ಹಲವು ಪ್ರಕೃತಿ ವಿಶೇಷಗಳಿದ್ದು, ಸಾಕಷ್ಟು ಸಣ್ಣ-ಪುಟ್ಟ ಬೆಟ್ಟಗುಡ್ಡಗಳಿವೆ. ಈ  ಬೆಟ್ಟಗುಡ್ಡಗಳಲ್ಲಿ ನರಿಗಳು ಮತ್ತು ಕರಡಿಗಳು ಹೇರಳವಾಗಿ ವಾಸಿಸುತ್ತಿವೆ.

ಸಮೀಪದ ಪ್ರವಾಸಿ ಸ್ಥಳಗಳು
ಕಾವೇರಿ ವನ್ಯಧಾಮದ ಕೆಲವೇ ಕಿ.ಮೀಗಳ ಸಮೀಪದಲ್ಲಿಯೇ ಕೆಲ ಪ್ರಮುಖ ಪ್ರವಾಸಿ ತಾಣಗಳಿದ್ದು, ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ಐತಿಹಾಸಿಕ ಮುತ್ತತ್ತಿ, ಮೇಕೆದಾಟು, ಭೀಮೇಶ್ವರಿ,  ಗಾಳಿಬೋರೆ ಮತ್ತು ಸಂಗಮ ಪ್ರವಾಸಿ ತಾಣಗಳಿವೆ. ಇದರ ಮತ್ತೊಂದು ಭಾಗದಲ್ಲಿ ಹೊಗೇನಕಲ್ ಜಲಪಾತವಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಅಸಂಖ್ಯ ಪ್ರವಾಸಿಗರು ನಿತ್ಯ ಇಲ್ಲಿಗೆ  ಭೇಟಿ ನೀಡುತ್ತಾರೆ. ಕಾವೇರಿ ವನ್ಯಧಾಮದ ಕೆಲ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಫಿಶಿಂಗ್ ಗೆ ಅನುಮತಿ ಇದ್ದು, ಪ್ರವಾಸಿಗರು ಗೈಡ್ ಗಳ ಸಹಾಯದ ಮೇರೆಗೆ ಫಿಶಿಂಗ್ ಮಾಡಬಹುದು. ಇನ್ನು  ಇಲ್ಲಿಂದ ಸುಮಾರು 7 ಕಿ.ಮೀ ದೂರದಲ್ಲಿ ದೊಡ್ಡಮಾಕಳ್ಳಿ ಇದ್ದು, 16 ಕಿ.ಮೀ ದೂರದಲ್ಲಿ ಭೀಮೇಶ್ವರಿ ಮತ್ತು ಗಾಳಿ ಬೋರೆ ಇದೆ.

ಕರ್ನಾಟಕದ ಹೆಮ್ಮೆಯ ಪಕ್ಷಿಧಾಮ
ಮತ್ತೊಂದು ಹೆಮ್ಮೆಯ ಅಂಶವೆಂದರೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಅಂದರೆ ಸುಮಾರು 70ಕ್ಕೂ ಅಧಿಕ ಜಾತಿಯ ಪಕ್ಷಿ ಪ್ರಭೇಧಗಳಿಗೆ ಈ ವನ್ಯಧಾಮ ಆಶ್ರಯ ಕಲ್ಪಿಸಿದೆ. ಏಷ್ಯಾ ಖಂಡದಲ್ಲಿ  ಅಪರೂಪದ ಪಕ್ಷಿ ಪ್ರಭೇದಗಳು ಎನಿಸಿಕೊಂಡಿರುವ ಸರ್ಕೀರ್ (ಕಂಗೆಂದು ಬಣ್ಣದ ಪಕ್ಷಿ), ಕೋಗಿಲೆ, ಹಸಿರು ಕೊಕ್ಕಿನ ಕೈರಾತ, ಬಿಳಿ ಹುಬ್ಬಿನ ಪಿಕಳಾ, ಮರಕುಟುಕ, ಕಂದು ಬಣ್ಣದ ತಲೆಯ  ಗಿಡುಗ, ಪಾರಿವಾಳಗಳು, ಬಿಳಿ ಬಣ್ಣದ ತಲೆಯ ಗರುಡ, ಕಪ್ಪು ಬಣ್ಣದ ಗರುಡ ಪಕ್ಷಿ, ನೀರು ಕಾಗೆ, ನೇರಳೆ ಬಣ್ಣದ ಬಕ, ತಿಳಿ ಹಸಿರು ಬಣ್ಣದ ಬಕ, ಬೆಳ್ಳಕ್ಕಿ, ಬ್ಲಾಕ್ ಐಬಿಸ್, ಕೊಕ್ಕರೆ, ಸೂಜಿಬಾಲದ  ಪಕ್ಷಿಗಳಂತಹ ನೂರಾರು ಪ್ರಭೇದದ ಪಕ್ಷಿಗಳು ನಮಗೆ ಇಲ್ಲಿ ಕಾಣ ಸಿಗುತ್ತವೆ.

ಪ್ರವಾಸಕ್ಕೆ ಯಾವ ಸಮಯ ಪ್ರಶಸ್ತ
ಕಾವೇರಿ ವನ್ಯಧಾಮಕ್ಕೆ ಪ್ರವಾಸ ಹೊರಡಲಿಚ್ಛಿಸುವವರು ನವೆಂಬರ್ ತಿಂಗಳಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಪ್ರವಾಸ ಹೊರಟರೆ ಒಳ್ಳೆಯದು. ಈ ಅವಧಿಯಲ್ಲಿ ಹೆಚ್ಚು ಚಳಿ ಇದ್ದು,  ಸಂತಾನೋತ್ಪತ್ತಿಗಾಗಿ ವಿವಿಧ ದೇಶಗಳ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. ಹೀಗಾಗಿ ಪ್ರವಾಸಕ್ಕೆ ಈ ಅವಧಿ ಪ್ರಶಸ್ತ್ಯವಾದದ್ದು ಎಂದು ತಜ್ಞರು ಹೇಳುತ್ತಾರೆ.

ಪ್ರವಾಸಿಗರು ಉಳಿದುಕೊಳ್ಳಲು ಸಾಕಷ್ಟು ವ್ಯವಸ್ಥೆ
ಇನ್ನು ಈ ಅರಣ್ಯಧಾಮದಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಕಾವೇರಿ ಫಿಶಿಂಗ್ ಕ್ಯಾಂಪ್, ಭೀಮೇಶ್ವರಿ ಫಿಶಿಂಗ್ ಕ್ಯಾಂಪ್, ದೊಡ್ಡಮಾಕಳ್ಳಿ ಮತ್ತು ಗಾಳಿಬೋರೆ  ಫಿಶಿಂಗ್ ಕ್ಯಾಂಪ್ ಗಳಲ್ಲಿ ಪ್ರವಾಸಿಗರು ಉಳಿದುಕೊಳ್ಳುವ ವ್ಯವಸ್ಥೆ ಇದೆ. ಭೀಮೇಶ್ವರಿ ಕ್ಯಾಂಪ್ ನಲ್ಲಿ ದಿನವೊಂದಕ್ಕೆ 850 ರು. ಪಾವತಿ ಮಾಡಿದರೆ, ಉಳಿದುಕೊಳ್ಳುವ ಕೊಠಡಿಯೊಂದಿಗೆ ಬೆಳಗಿನ  ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ವೇಳೆಗೆ ಊಟ ಲಭಿಸುತ್ತದೆ. ಇದಲ್ಲದೆ ರಿವರ್ ರ‌್ಯಾಫ್ಟಿಂಗ್, ಫಿಶಿಂಗ್, ಅರಣ್ಯ ಪ್ರವೇಶಕ್ಕೆ ಪ್ರತ್ಯೇಕ ಶುಲ್ಕವಿದೆ.

ಮಾಹಿತಿ: ಕರ್ನಾಟಕ ಪ್ರವಾಸೋಧ್ಯಮ ಇಲಾಖೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com