ವಾಷಿಂಗ್ಟನ್: ಉಗ್ರ ಸಂಘಟನೆಗಳ ಬೆದರಿಕೆಗಳೆಲ್ಲ ಪಾಕಿಸ್ತಾನದಿಂದಲೇ ಹೊರಹೊಮ್ಮುತ್ತಿದೆ ಎಂದು ಅಮೆರಿಕ ಮತ್ತೊಮ್ಮೆ ಎಚ್ಚರಿಸಿದೆ.
ಮುಖ್ಯವಾಗಿ ಹಕಾನಿ ಜಾಲದಿಂದ ಎದುರಾಗುವ ಬೆದರಿಕೆಗಳು ಪಾಕ್ ನೆಲದಿಂದಲೇ ಹೊರಬರುತ್ತೀವೆ ಎಂದು ಅಮೆರಿಕ ವಿದೇಶ ಸಚಿವಾಲಯದ ವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ.
ಇದೇ ವೇಳೆ, ಅಫ್ಘಾನಿಸ್ಥಾನದಲ್ಲಿ ನೆಲೆಯೂರಿರುವ ಹಕಾನಿ ಭಯೋತ್ಪದಕ ಜಾಲವನ್ನು ಬಹುತೇಕ ನಿರ್ನಾಮ ಮಾಡಲಾಗಿದೆ ಎಂಬ ಪಾಕ್ ಭದ್ರತಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಅವರ ಹೇಳಿಕೆಯನ್ನು ಅಮೆರಿಕ ತಳ್ಳಿ ಹಾಕಿದೆ.
ಹಕಾನಿ ಜಾಲ ಸಹಿತವಾಗಿ ಇತರ ಅನೇಕ ಭಯೋತ್ಪಾದಕ ಸಂಘಟನೆಗಳ ಬೆದರಿಕೆಗಳು ಪಾಕ್ ನೆಲದಿಂದಲೇ ಹೊರಹೊಮ್ಮುತ್ತಿವೆ ಎಂಬುದನ್ನು ಮನಗಂಡಿದ್ದೇವೆ. ಈ ಬೆದರಿಕೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪಾಕ್ ಸರಕಾರ ಇನ್ನಷ್ಟು ಬಲವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾವು ಬಯಸುತ್ತೇವೆ ಎಂಬುದಾಗಿ ಅಮೆರಿಕದ ಮಾರ್ಕ್ ಟೋನರ್ ಹೇಳಿದ್ದಾರೆ.