ಮಗುವನ್ನು ರಕ್ಷಿಸಿ ಎಸ್ಕಲೇಟರ್ ಗೆ ಬಲಿಯಾದ ತಾಯಿ..!

ಚಲಿಸುತ್ತಿದ್ದ ಎಸ್ಕಲೇಟರ್ ಇದ್ದಕ್ಕಿದ್ದಂತೆ ಬಾಯ್ತೆರೆದುಕೊಂಡ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ಧಾರುಣ ಘಟನೆ ಚೀನಾದಲ್ಲಿ ನಡೆದಿದೆ...
ಎಸ್ಕಲೇಟರ್ ಗೆ ಬಲಿಯಾದ ಮಹಿಳೆ
ಎಸ್ಕಲೇಟರ್ ಗೆ ಬಲಿಯಾದ ಮಹಿಳೆ
ಬೀಜಿಂಗ್: ಚಲಿಸುತ್ತಿದ್ದ ಎಸ್ಕಲೇಟರ್ ಇದ್ದಕ್ಕಿದ್ದಂತೆ ಬಾಯ್ತೆರೆದುಕೊಂಡ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ಧಾರುಣ ಘಟನೆ ಚೀನಾದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು 30 ವರ್ಷದ ಕ್ಸಿಯಾಂಗ್ ಲ್ಯುಜ್ವಾನ್ ಎಂದು ಗುರುತಿಸಲಾಗಿದ್ದು, ಶಾಪಿಂಗ್ ಗಾಗಿ ಆಕೆ ತನ್ನ ಮಗನೊಂದಿಗೆ ಮಾಲ್ ಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಜಿಂಗ್ ಹ್ಯೂ ನಗರದಲ್ಲಿರುವ ಪ್ರತಿಷ್ಟಿತ ಶಾಪಿಂಗ್ ಮಾಲ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ತಮ್ಮ ಮಗುವನ್ನು ಕರೆದುಕೊಂಡು ಬರುವ ಮಹಿಳೆ ಮಾಲ್ ಪ್ರವೇಶಿಸಿ ಆರನೇ ಫ್ಲೋರ್ ನಿಂದ 7ನೇ ಫ್ಲೋರ್ ಗೆ ಎಸ್ಕಲೇಟರ್ ಮೂಲಕ  ಹತ್ತಿ ಇನ್ನೇನು ಮೇಲೆ ಬರುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಎಸ್ಕಲೇಟರ್ ಬಾಯಿ ತೆರೆದುಕೊಂಡಿದೆ. ಕೂಡಲೇ ತಾಯಿ ಮಗನನ್ನು ಎತ್ತಿ ಮೇಲಕ್ಕೆ ಎಸೆದಿದ್ದಾರೆ. ಅಲ್ಲಿಯೇ ನಿಂತಿದ್ದ ಮಾಲ್ ನ ಸ್ವಚ್ಛತಾ ಸಿಬ್ಬಂದಿ ಮಗುವನ್ನು ರಕ್ಷಿಸಿದ್ದಾರೆ.
ಆದರೆ ದುರಾದೃಷ್ಟವಶಾತ್ ಎಸ್ಕಲೇಟರ್ ಗೆ ಸಿಲುಕಿದ ಮಹಿಳೆಯನ್ನು ರಕ್ಷಿಸಲು ಸಿಬ್ಬಂದಿ ಯತ್ನಿಸಿದರೂ ಆಕೆ ಎಸ್ಕಲೇಟರ್ ಅಡಿಯಲ್ಲೇ ಹೋಗುತ್ತಿದ್ದ ಕಾರಣ ಆಕೆ ಅಲ್ಲಿಯೇ ಧಾರುಣವಾಗಿ ಮೃತಪಟ್ಟಿದ್ದಾಳೆ. ಇವಿಷ್ಟೂ ದೃಶ್ಯಾವಳಿಗಳು ಮಾಲ್ ಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಮಾಲ್ ವಿರುದ್ಧ ಭಾರೀ ಅಕ್ರೋಶ ವ್ಯಕ್ತವಾಗುತ್ತಿದೆ.
ಇನ್ನು ಮಾಲ್ ನ ಮೂಲಗಳ ಪ್ರಕಾರ ಎಸ್ಕಲೇಟರ್ ಗೆ ಅಳವಡಿಸಲಾಗಿದ್ದ ಎಸ್ಕಲೇಟರ್ ಅನ್ನು ಇತ್ತೀಚೆಗಷ್ಟೇ ದುರಸ್ತಿಗೆ ಒಳಪಡಿಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಸಿಬ್ಬಂದಿಗಳ ಬೇಜವಾಬ್ದಾರಿಯಿಂದಾಗಿ ಎಸ್ಕಲೇಟರ್ ಗೆ ಅಳವಡಿಸಲಾಗಿದ್ದ ಸ್ಕ್ರ್ಯೂ ಕಳಚಿಕೊಂಡಿದೆ ಇದನ್ನು ಗಮನಿಸದ ಸಿಬ್ಬಂದಿಗಳು ಎಸ್ಕಲೇಟರ್ ಅನ್ನು ಸಾರ್ವಜನಿಕ ಬಳಕೆಗೆ ಬಿಟ್ಟಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
2011ರಲ್ಲಿಯೂ ಇದೇ ಚೀನಾದ ಬೀಜಿಂಗ್ ಸಬ್ ವೇನಲ್ಲಿಯೂ ಇಂತಹುದೇ ಘಟನೆ ಸಂಭವಿಸಿತ್ತು. ಸಬ್ ವೇನಲ್ಲಿ ಅಳವಡಿಸಲಾಗಿದ್ದ ಎಸ್ಕಲೇಟರ್ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಓರ್ವ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.

ಸೂಚನೆ: ಈ ವಿಡಿಯೋ 18 ವರ್ಷದೊಳಗಿನ ಮಕ್ಕಳ ವೀಕ್ಷಣೆಗೆ ಸೂಕ್ತವಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com