

ವ್ಯಾಲೆಟಾ: ಯಾವುದೇ ಪೂರ್ವ ಶರತ್ತುಗಳಿಲ್ಲದೆ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಪಾಕಿಸ್ಥಾನ ಸಿದ್ಧವಿದೆ ಎಂದು ಪಾಕ್ ಪ್ರಧಾನಿ ನವಾಜ್ ಶರೀಫ್ ಅವರು ಹೇಳಿದ್ದಾರೆ.
ಭಾರತ ಹಾಗೂ ಅಫ್ಘಾನಿಸ್ಥಾನ ಸೇರಿದಂತೆ ನೆರೆಯ ಎಲ್ಲಾ ರಾಷ್ಟ್ರಗಳೊಂದಿಗೆ ಸ್ನೇಹಯುತ ಸಂಬಂಧ ಹೊಂದಲು ಪಾಕಿಸ್ಥಾನ ಬಯಸುತ್ತದೆ ಎಂದು ಶರೀಫ್ ಹೇಳಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.
ಮಾಲ್ಟೆಸ್ ರಾಜಧಾನಿ ವ್ಯಾಲೆಟಾದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ದೇಶಗಳ ಮುಖ್ಯಸ್ಥರ ಶೃಂಗ ಸಭೆಯಲ್ಲಿ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮೆರಾನ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಶರೀಫ್ ಈ ಮಾತುಗಳನ್ನು ಹೇಳಿದ್ದಾರೆ ಎನ್ನಲಾಗಿದೆ.
ಪಾಕಿಸ್ಥಾನವು ಭಯೋತ್ಪಾದನೆಯ ಎಲ್ಲ ನಮೂನೆಗಳನ್ನು ಖಂಡಿಸುತ್ತದೆ; ಅಂತೆಯೇ ಪ್ಯಾರಿಸ್‌ನಲ್ಲಿ ಈಚೆಗೆ ನಡೆದ ಐಸಿಸ್ ಉಗ್ರರ ದಾಳಿಯಿಂದ ತೀವ್ರವಾಗಿ ನೊಂದಿದೆ ಎಂದ ಶರೀಫ್, ಪಾಕಿಸ್ಥಾನವು ಸ್ವತಃ ಭಯೋತ್ಪಾದನೆಯ ಬಲಿಪಶುವಾಗಿದ್ದು ಅದಕ್ಕೆ ಫ್ರಾನ್ಸ್ ನ ನೋವು ಏನೆಂಬುದು ಅರ್ಥವಾಗುತ್ತದೆ ಎಂದು ಹೇಳಿದರು.
ಕ್ಯಾಮೆರಾನ್ ಅವರು ಈ ಸಂದರ್ಭದಲ್ಲಿ ಭಯೋತ್ಪಾದನೆಯನ್ನು ನಿರ್ನಾಮ ಮಾಡುವಲ್ಲಿನ ಪಾಕಿಸ್ಥಾನದ ಪ್ರಯತ್ನಗಳನ್ನು ಪ್ರಶಂಸಿಸಿದರು.