

ವಾಷಿಂಗ್ಟನ್: ಪಾಕಿಸ್ತಾನ ವಿಶ್ವ ಸಂಸ್ಥೆಯಲ್ಲಿ ಮಾಡಿರುವ ಆಪಾದನೆಯನ್ನು ಭಾರತ ಬಲವಾಗಿ ತಳ್ಳಿ ಹಾಕಿದ್ದು, ವಿಶ್ವ ಸಂಸ್ಥೆಯ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಮಹೀಲಾ ಲೋದಿ ಈ ತಿಂಗಳ ಆರಂಭದಲ್ಲಿ ಬರೆದಿರುವ ಪತ್ರದ ಬಗ್ಗೆ ಭಾರತಕ್ಕೆ ಅರಿವಿದೆ ಎಂದು ವಿದೇಶಾಂಗ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಗೋಡೆಯನ್ನು ನಿರ್ಮಿಸಲಾಗುತ್ತಿದೆ ಮತ್ತು ತಮ್ಮ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆಯುತ್ತಿಲ್ಲ ಎಂದು ಪಾಕಿಸ್ತಾನ ವಿಶ್ವ ಸಂಸ್ಥೆಯಲ್ಲಿ ಆರೋಪಿಸಿತ್ತು.
ಈ ಸಂಬಂಧ ಸೆ. 4ರಂದು ಮೊದಲ ಪತ್ರ ಬರೆಯಲಾಗಿದೆ. 2 ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳಿಲ್ಲ ಎಂದು ಆ ಪತ್ರದಲ್ಲಿ ಆರೋಪಿಸಲಾಗಿದೆ. ಆದರೆ, ಪತ್ರದಲ್ಲಿ ಬಿಎಸ್ ಎಫ್ ಮತ್ತು ಪಾಕ್ ರೇಂಜರ್ ಗಳು ಮಾತುಕತೆಗಳ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ. ಹೀಗಾಗಿ ಈ ಪತ್ರದಲ್ಲೇ ದ್ವಿಪಕ್ಷೀಯ ಮಾತುಕತೆಗಳ ಕುರಿತಂತೆ ಗೊಂದಲಗಳಿವೆ ಎಂದು ಸ್ವರೂಪ್ ತಿಳಿಸಿದ್ದಾರೆ.
ಇನ್ನೊಂದು ಪತ್ರವನ್ನು ಪಾಕಿಸ್ತಾನ ಮೂಲದ ಹಿಝ್ಬುಲ್ ಮುಜಾಹಿದೀನ್ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ಸಲ್ಲಿಸಿರುವ ಸಾಧ್ಯತೆಗಳಿವೆ. ಸಲಾಹುದ್ದಿನ್ ನನ್ನು ಭಾರತ ಈಗಾಗಲೇ ಭಯೋತ್ಪಾದಕನೆಂದು ಭಾವಿಸಿದೆ. ಈತ ಮಾತ್ರ ಭಾರತ ಗಡಿ ನಿಯಂತ್ರಣ ರೇಖೆಯಲ್ಲಿ ಗೋಡೆಯನ್ನು ನಿರ್ಮಿಸುತ್ತಿದೆ ಎಂದು ಆರೋಪಿಸಿದ್ದಾನೆ. ಅದನ್ನು ಹೊರತು ಪಡೆಸಿದರೆ ಇನ್ನಾವುದೇ ಪಾಕಿಸ್ತಾನದ ಪತ್ರ ವಿಶ್ವ ಸಂಸ್ಥೆಗೆ ತಲುಪಿಲ್ಲ ಎಂದು ಸ್ವರೂಪ್ ಸ್ಪಷ್ಟಪಡಿಸಿದ್ದಾರೆ.
ವಿಶ್ವ ಸಂಸ್ಥೆಯು ಈ ಬಗ್ಗೆ ಏನಾದರೂ ಕ್ರಮ ಕೈಗೊಂಡಿದೆಯಾ? ಎಂಬ ಪ್ರಶ್ನೆ ಎದುರಾಗಿತ್ತು. ಒಂದು ವೇಳೆ ವಿಶ್ವ ಸಂಸ್ಥೆ ಕ್ರಮ ಕೈಗೊಂಡರೆ ನಾವು ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡುತ್ತೇವೆ. ಆದರೆ ಈವರೆಗೆ ವಿಶ್ವ ಸಂಸ್ಥೆ ಕ್ರಮ ಕೈಗೊಂಡಿಲ್ಲವೆಂದ ಮೇಲೆ ಅವರ ಭಾರತದ ಮೇಲೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಗೋತ್ತಾಗಿದೆ ಎಂದು ಅವರು ಹೇಳಿದ್ದಾರೆ.