ಅಂಕಾರಾ: ಟರ್ಕಿ ರಾಜಧಾನಿ ಅಂಕಾರದಲ್ಲಿ ಮಿಲಿಟರಿ ಪಡೆಯನ್ನು ಗುರಿಯಾಗಿರಿಸಿ ಬುಧವಾರ ಸಂಭವಿಸಿದ ಕಾರು ಬಾಂಬ್ ದಾಳಿಯಲ್ಲಿ 28 ಮಂದಿ ಸಾವಿಗೀಡಾಗಿದ್ದು, 61 ಮಂದಿಗೆ ಗಾಯಗಳಾಗಿವೆ.
ಮಿಲಿಟರಿ ವಾಹನಗಳು ಹಾದು ಹೋಗುತ್ತಿರುವ ದಾರಿಯಲ್ಲಿ ಈ ಬಾಂಬ್ ಸ್ಫೋಟ ಸಂಭವಿಸಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂಬುದ ಸದ್ಯ ಪತ್ತೆಯಾಗಿಲ್ಲ ಎಂದು ಟರ್ಕಿ ಡೆಪ್ಯುಟಿ ಪ್ರಧಾನಿ ನುಮಾನ್ ಕುರ್ತುಲ್‌ಮಸ್ ಹೇಳಿದ್ದಾರೆ.
ಪಾರ್ಲಿಮೆಂಟ್ ಮತ್ತು ಮಿಲಿಟರಿ ಕೇಂದ್ರದ ಸಮೀಪ ಈ ಸ್ಫೋಟ ನಡೆದಿತ್ತು. ಈ ಸ್ಫೋಟದ ಕಾರಣಕರ್ತರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ರೆಸೆಪ್ ತೆಯ್ಯಿಪ್ ಎರ್ಡೋಗನ್ ಹೇಳಿದ್ದಾರೆ. ಈ ದಾಳಿಯ ಹಿಂದೆ ಜಿಹಾದಿ ಇಲ್ಲವೇ ಕುರ್ದಿಶ್ ಬಂಡುಕೋರರ ಕೈವಾಡವಿದೆ ಎಂದು ಟರ್ಕಿ ಸರ್ಕಾರ ಆರೋಪಿಸಿದೆ.