ಐಎಂಎಫ್ ಸುಧಾರಣೆ: ಭಾರತಕ್ಕೆ ಹೆಚ್ಚು ಮತಾಧಿಕಾರ

ಭಾರತ, ಚೀನಾ ಸೇರಿದಂತೆ ವೇಗವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿರುವ ದೇಶಗಳ ಬಹುಕಾಲದ ಬೇಡಿಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಭಾರತ, ಚೀನಾ ಸೇರಿದಂತೆ ವೇಗವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿರುವ ದೇಶಗಳ ಬಹುಕಾಲದ ಬೇಡಿಕೆ ಈಡೇರಿದೆ. ಹಲವು ವರ್ಷಗಳಿಂದ ಜಾರಿಯಾಗದೆ ಉಳಿದಿದ್ದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್ )ಯಲ್ಲಿನ ಕೋಟಾ ಸುಧಾರಣೆಗಳನ್ನು ಜಾರಿಗೆ ತರಲಾಗಿದ್ದು ಭಾರತದ ಮತಾಧಿಕಾರ ಹಕ್ಕನ್ನು ಹೆಚ್ಚಿಸಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಚಾರಿತ್ರಿಕ ಬೆಳವಣಿಗೆಯಾಗಿದೆ.
ಇದೇ ಮೊದಲ ಬಾರಿಗೆ ಭಾರತ, ಚೀನಾ, ಬ್ರೆಜಿಲ್ ಮತ್ತು ರಷ್ಯಾಗಳು ಐಎಂಎಫ್ ನ ಅಗ್ರ ಗಣ್ಯ ಹತ್ತು ದೇಶಗಳ ಸಾಲಿಗೆ ಸೇರಿದೆ. ಇದೇ ಸಂದರ್ಭದಲ್ಲಿ ಶೇ.6ರಷ್ಟು ಪಾಲು ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಮತ್ತು ಅಭಿವೃದ್ದಿಶೀಲ ದೇಶಗಳಿಗೆ ವರ್ಗವಾಗಲಿದೆ. ಮಿತಿಗಿಂತಲೂ ಅತಿಹೆಚ್ಚು ಪಾಲು ಹೊಂದಿದ ದೇಶಗಳಿಂದ ಅತಿ ಕಡಿಮೆ ಪಾಲು ಹೊಂದಿರುವ ದೇಶಗಳಿಗೆ ಈ ಪಾಲು ವರ್ಗವಾಗಲಿದೆ.
ಹಲವಾರು ವರ್ಷಗಳಿಂದ ಕೋಟಾ ಸುಧಾರಣೆಗಳು ಜಾರಿಯಾಗದೆ ಉಳಿದಿದ್ದವು. 2015ರಲ್ಲಿ ಅಮೆರಿಕ ಕಾಂಗ್ರೆಸ್ ಸುಧಾರಣೆಗಳನ್ನು ಜಾರಿಗೆ ತರಲು ಅನುಮೋದನೆ ನೀಡಿತು. ಇದಕ್ಕೂ ಮೊದಲು 2010ರ ಡಿಸೆಂಬರ್ ನಲ್ಲಿ ಐಎಂಎಫ್ ನ ಬೋರ್ಡ್ ಆಫ್ ಗೌವರ್ನರ್ಸ್ ಕೋಟಾ ಮತ್ತು ಆಡಳಿತ ಸುಧಾರಣೆ ಯೋಜನೆಗೆ ಅನುಮೋದನೆ ನೀಡಿತ್ತು. ಸುಧಾರಣೆಗಳ ಜಾರಿ ಐತಿಹಾಸಿಕವಾಗಿದ್ದು ಸಂಸ್ಥೆಯ ಆಡಳಿತ ಉತ್ತಮಪಡಿಸಲು ಮತ್ತು ಶಾಶ್ವತ ನಿಧಿ ರೂಪಿಸಲು ಸಹಕಾರಿಯಾಗಲಿದೆ ಎಂದು ಐಎಂಎಫ್ ಹೇಳಿದೆ.
ಈ ಸುಧಾರಣೆಗಳಿಂದ ಸಂಸ್ಥೆಯ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್ ಡಿಆರ್) 47,700 ಕೋಟಿ ಡಾಲರ್ ಗಳಿಂದ 65,900 ಕೋಟಿ ಡಾಲರ್ ಗಳಿಗೆ ಹೆಚ್ಚಲಿದೆ. ಇದರಿಂದ ಸಂಸ್ಥೆಯ ಹಣಕಾಸು ಸ್ಥಿತಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದಿದೆ.
ಐಎಂಎಫ್ ನಲ್ಲಿ 188 ಸದಸ್ಯ ದೇಶಗಳಿದ್ದು ಸದ್ಯ ಭಾರತ ಶೇ.2.34ರಷ್ಟು ಮತ ಅಧಿಕಾರ ಕೋಟಾ ಹೊಂದಿದೆ. ಈ ಕೋಟಾದಂತೆ ಸಂಸ್ಥೆಯಲ್ಲಿ ಭಾರತದ ಪಾಲು ಶೇ.2.44ರಷ್ಟಿದೆ. ಸಂಸ್ಥೆಯಲ್ಲಿ ಮೊದಲ ಹತ್ತು ದೇಶಗಳ ಸಾಲಿನಲ್ಲಿರುವ ಇತರ ದೇಶಗಳೆಂದರೆ ಅಮೆರಿಕ, ಜಪಾನ್, ಫ್ರಾನ್ಸ್, ಜಮರ್ಮನಿ, ಇಟಲಿ ಮತ್ತು ಬ್ರಿಟನ್.
ಸುಧಾರಣೆಗಳನ್ನು ಜಾರಿಗೆ ತರುತ್ತಿರುವುದು ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ. ಸಮರ್ಥತೆ ಮತ್ತು ಹೊಣೆಗಾರಿಕೆ ಹೆಚ್ಚಿಸಲಿದೆ ಎಂದು ಹೇಳಿರುವ ಐಎಂಫ್, ಇದೇ ಮೊದಲ ಬಾರಿಗೆ ಆಡಳಿತ ಮಂಡಳಿಯಲ್ಲಿ ಎಲ್ಲರೂ ಆಯ್ಕೆಯಾದ ನಿರ್ದೇಶಕರೇ ಇರಲಿದ್ದಾರೆ. ನಿರ್ದೇಶಕರನ್ನು ನೇಮಕ ಮಾಡುವ ಪ್ರಕ್ರಿಯೆ ದೂರವಾಗಲಿದೆ. ಈಗಿನ ನಿಯಮಗಳಂತೆ ಅತಿಹೆಚ್ಚು ಕೋಟಾ ಹೊಂದಿರುವ ದೇಶಗಳು ಕಾರ್ಯಕಾರಿ ನಿರ್ದೇಶಕರನ್ನು ನೇಮಿಸುತ್ತಿದ್ದವು. 
ಈ ಸುಧಾರಣೆಗಳಿಂದ ಸಂಸ್ಥೆ ಇನ್ನಷ್ಟು ಸ್ಪಂದಿಸಲು ಸಾಧ್ಯವಾಗಲಿದೆ. ವೇಗವಾಗಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ತನ್ನ ಸದಸ್ಯ ದೇಶಗಳ ಅಗತ್ಯಗಳಿಗೆ ತಕ್ಕಂತೆ ನೆರವು ಒದಗಿಸಲು ಸಾಧ್ಯವಾಗಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕ್ರಿಸ್ಟೀನಾ ಲೆಗಾರ್ಡ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com