

ಆಂಸ್ಟರ್ಡ್ಯಾಮ್: ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳನ್ನು ವಿರೋಧಿಸಿ ಫಿಲಿಪೈನ್ಸ್ ಚೀನಾ ವಿಬಿರುದ್ಧ ಹೂಡಿದ್ದ ದಾವೆಯ ತೀರ್ಪು ಪ್ರಕಟವಾಗಿದ್ದು ಚೀನಾಗೆ ಭಾರಿ ಹಿನ್ನಡೆಯಾಗಿದೆ.
ನೆದರ್ಲ್ಯಾಂಡ್ ನ ಹೇಗ್ ನಲ್ಲಿರುವ ಯುಎನ್ ಸಿಎಲ್ ಒಎಸ್ ನ್ಯಾಯಾಲಯ ಪ್ರಕಟಿಸಿರುವ ತೀರ್ಪಿನಲ್ಲಿ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಗೆ ಐತಿಹಾಸಿಕ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದಾಗಿ ಚೀನಾಗೆ ಜಾಗತಿಕ ಮಟ್ಟದಲ್ಲಿ ಭಾರಿ ಹಿನ್ನಡೆಯಾಗಿದೆ. ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫಿಲಿಪೈನ್ಸ್ ನ ವಿದೇಶಾಂಗ ಸಚಿವರು ದಕ್ಷಿಣ ಚೀನಾ ಸಮುದ್ರದಕ್ಕೆ ಸಂಬಂಧಿಸಿದಂತೆ ಚೀನಾ ಇನ್ನಾದರೂ ಸಂಯಮ ಮತ್ತು ಸಮಚಿತ್ತತೆ ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಚೀನಾದ ವಿರುದ್ಧವಾಗಿ ತೀರ್ಪು ಪ್ರಕಟಿಸಿರುವ ನ್ಯಾಯಮಂಡಳಿ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಪ್ರತಿಪಾದಿಸುತ್ತಿದ್ದ ಆರ್ಥಿಕ ಹಕ್ಕುಗಳನ್ನು ತಿರಸ್ಕರಿಸಿದ್ದು, ದಕ್ಷಿಣ ಚೀನಾ ಪ್ರದೇಶದ ಸಂಪನ್ಮೂಲಗಳ ಮೇಲೆ ಚೀನಾಗೆ ಐತಿಹಾಸಿಕ ಹಕ್ಕಿಲ್ಲ ಎಂದು ಹೇಳಿದೆ. ಇದರಿಂದಾಗಿ ಚೀನಾಗೆ ಭಾರಿ ಹಿನ್ನಡೆಯುಂಟಾಗಿದ್ದು ಚೀನಾ ಸಮುದ್ರಕ್ಕೆ ಸಂಬಂಧಿಸಿದ ವಿವಾದಿತ ಪ್ರದೇಶವನ್ನು ಚೀನಾ ಫಿಲಿಪೈನ್ಸ್ ಗೆ ಬಿಟ್ಟುಕೊಡಬೇಕಾಗುತ್ತದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳನ್ನು ವಿರೋಧಿಸಿ ಫಿಲಿಪೈನ್ಸ್ ವಿಶ್ವಸಂಸ್ಥೆಯ ಅಂಗವಾಗಿರುವ ಯುಎನ್ ಸಿಎಲ್ ಒಎಸ್ ನಲ್ಲಿ ದಾವೆ ಹೂಡಿತ್ತು. ಆದರೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಚೀನಾ ಫಿಲಿಪೈನ್ಸ್ ದಾವೆಯನ್ನೇ ಕಾನೂನು ಬಾಹಿರ ಎಂದು ಜಾಗತಿಕ ಸಮುದಾಯವನ್ನು ಮನವೊಲಿಸಲು ಯತ್ನಿಸಿತ್ತು.