

ವಾಷಿಂಗ್ ಟನ್: ಸೆಕೆಂಡ್ ಹ್ಯಾಂಡ್( ಈಗಾಗಲೇ ಬಳಸಿದ) ಪ್ರಿಡ್ಜ್ (ಫ್ರೀಜರ್) ಖರಿದಿಸಿದ ಮಹಿಳೆಗೆ ಅದರೊಳಗೆ ಮೃತ ದೇಹ ಇರುವುದು ಪತ್ತೆಯಾಗಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಉತ್ತರ ಕರೋಲಿನಾದಲ್ಲಿರುವ ಮಹಿಳೆಯೊಬ್ಬರು ತಮ್ಮ ನೆರೆಯಲ್ಲಿರುವವರಿಂದ ಫ್ರಿಡ್ಜ್ ಖರೀದಿಸಿದ್ದರು. ಆದರೆ ಅದನ್ನು ತೆರೆದು ನೋಡಿದಾಗ ಮಾನವ ಮೃತದೇಹದ ಅವಶೇಷಗಳನ್ನು ಕಂಡು ದಂಗಾಗಿದ್ದಾರೆ. ತಕ್ಷಣವೇ ಅಲ್ಲಿನ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಿಡ್ಜ್ ನನ್ನು ತೆರೆದು ನೋಡುತ್ತಿದ್ದಂತೆಯೇ ನನಗೆ ಆಘಾತವಾಯಿತು, ತಕ್ಷಣವೇ 911 ಕ್ಕೆ ಕರೆ ಮಾಡಿ ಮಾಹಿತಿ ನೀಡಿದೆ ಎಂದು ಮಹಿಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಫ್ರಿಡ್ಜ್ ನ್ನು ಚರ್ಚ್ ನಲ್ಲಿ ನಡೆಸಲಾಗುತ್ತಿದ್ದ ಕಾರ್ಯಕ್ರಮವೊಂದಕ್ಕೆ ಬಳಕೆ ಮಾಡಲಾಗುತ್ತಿತ್ತು. ಮಾರಾಟ ಮಾಡಿದ ನತರವೂ ಚರ್ಚ್ ಗೆ ಸೇರಿದ ಕೆಲವೊಂದು ವಸ್ತುಗಳಿದ್ದ ಕಾರಣ ತಕ್ಷಣವೇ ತೆರೆದು ನೋಡದಂತೆ ಮಾರಾಟ ಮಾಡಿದ್ದ ಮಹಿಳೆ ಹೇಳಿದ್ದರು. ಆದರೆ ಬಹಳಷ್ಟು ಸಮಯವಾದ ನಂತರವೂ ಫ್ರಿಡ್ಜ್ ನಲ್ಲಿದ್ದ ವಸ್ತುಗಳನ್ನು ವಾಪಸ್ ತೆಗೆದುಕೊಂಡು ಹೋಗಲು ಯಾರೂ ಬರಲಿಲ್ಲ. ಆದ್ದರಿಂದ ಫ್ರಿಡ್ಜ್ ನ್ನು ತೆರೆದು ನೋಡಿದೆ. ಈ ವೇಳೆ ಅದರಲ್ಲಿ ಮೃತ ದೇಹ ಇದ್ದದ್ದನ್ನು ಕಂಡು ದಂಗಾದೆ ಎಂದು ಫ್ರಿಡ್ಜ್ ಖರೀದಿಸಿದ ಮಹಿಳೆ ತಿಳಿಸಿದ್ದಾರೆ.
ಫ್ರಿಡ್ಜ್ ಖರೀದಿಸಿದ ಮಹಿಳೆಯ ಪ್ರಕಾರ ಅದರಲ್ಲಿ ಇದ್ದದ್ದು ನೆರೆ ಮನೆಯವರ ತಾಯಿಯ ಮೃತದೇಹದ ಅವಶೇಷ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ ವರೆಗೂ ವೃದ್ಧೆ ನೆರೆ ಮನೆಯಲ್ಲೇ ಇದ್ದರು. ಆ ನಂತರದ ದಿನಗಳಲ್ಲಿ ಹೊರಗೆ ಕಾಣಿಸಿರಲಿಲ್ಲ ಎಂದು ಫ್ರಿಡ್ಜ್ ಖರೀದಿಸಿದ ಮಹಿಳೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.