ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ವಿರೋಧಿಸುತ್ತಿದ್ದ ರಾಷ್ಟ್ರಗಳಿಂದ ಈಗ ಮೃದು ನಿಲುವು!

ಭಾರತದ ಸೇರ್ಪಡೆಯನ್ನು ವಿರೋಧಿಸುತ್ತಿದ್ದ ಮೂರು ರಾಷ್ಟ್ರಗಳು ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದು, ಭಾರತದ ಪರ ಮೃದು ಧೋರಣೆ ತಳೆದಿವೆ.
ಎನ್ ಎಸ್ ಜಿ ಸಮೂಹಕ್ಕೆ ಭಾರತದ ಸೇರ್ಪಡೆ ವಿರೋಧಿಸುತ್ತಿದ್ದ ರಾಷ್ಟ್ರಗಳಿಂದ ನಿರ್ಧಾರ ಬದಲಾವಣೆ!
ಎನ್ ಎಸ್ ಜಿ ಸಮೂಹಕ್ಕೆ ಭಾರತದ ಸೇರ್ಪಡೆ ವಿರೋಧಿಸುತ್ತಿದ್ದ ರಾಷ್ಟ್ರಗಳಿಂದ ನಿರ್ಧಾರ ಬದಲಾವಣೆ!

ವಿಯೆನ್ನಾ: ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹಕ್ಕೆ(ಎನ್ ಎಸ್ ಜಿ)  ಸೇರ್ಪಡೆಗೊಳ್ಳಲು ಭಾರತದ ರಾಜತಾಂತ್ರಿಕ ಯತ್ನ ಮುಂದುವರೆದಿರುವಾಗಲೇ, ಭಾರತದ ಸೇರ್ಪಡೆಯನ್ನು ವಿರೋಧಿಸುತ್ತಿದ್ದ ಮೂರು ರಾಷ್ಟ್ರಗಳು ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದು, ಭಾರತದ ಪರ ಮೃದು ಧೋರಣೆ ತಳೆದಿವೆ.

ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯಲು ಭಾರತ ನಡೆಸುತ್ತಿರುವ ರಾಜತಾಂತ್ರಿಕ ಪ್ರಯತ್ನ ಹಾಗೂ ಭಾರತಕ್ಕೆ ಅಮೆರಿಕ ನೀಡಿರುವ ಬೆಂಬಲದ ಪರಿಣಾಮವಾಗಿ ಈ ಬೆಳವಣಿಗೆ ನಡೆದಿದೆ ಎಂದು ಭಾರತದ ಸೇರ್ಪಡೆ ಬಗ್ಗೆ ಮೃದು ಧೋರಣೆ ತಳೆದಿರುವ ರಾಷ್ಟ್ರಗಳ ನಿರ್ಧಾರವನ್ನು ವಿಶ್ಲೇಷಿಸಲಾಗುತ್ತಿದೆ.

ರಾಯಟರ್ಸ್ ವರದಿಯ ಪ್ರಕಾರ ಈ ಹಿಂದೆ ಎನ್ ಎಸ್ ಜಿ ಸಮೂಹಕ್ಕೆ ಭಾರತದ ಸೇರ್ಪಡೆಯನ್ನು ವಿರೋಧಿಸುತ್ತಿದ್ದ ಕೆಲವು ರಾಷ್ಟ್ರಗಳು ಈಗ ನಿಲುವು ಬದಲಿಸಿಕೊಂಡಿದ್ದು, ರಾಜೀಮಾಡಿಕೊಳ್ಳಲು ಮುಂದಾಗಿವೆ ಎಂದು ತಿಳಿದುಬಂದಿದೆ. ಆದರೆ ಚೀನಾದ ನಿಲುವು ಮಾತ್ರ ಹಿಂದಿನಂತೆಯೇ ಮುಂದುವರೆದಿದ್ದು, ಭಾರತದ ಸೇರ್ಪಡೆಗೆ ಅಡ್ಡಿ ಉಂಟು ಮಾಡುತ್ತಿದೆ, ಅಷ್ಟೇ ಅಲ್ಲದೇ ಒಂದು ವೇಳೆ ಭಾರತಕ್ಕೆ ಎನ್ಎಸ್ ಜಿ ಸಮೂಹದ ಸದಸ್ಯತ್ವ ನೀಡಿದರೆ ತನ್ನ ಪರಮಾಪ್ತ ರಾಷ್ಟ್ರ ಪಾಕಿಸ್ತಾನಕ್ಕೂ ಸಹ ಸದಸ್ಯತ್ವ ನೀಡಬೇಕೆಂದು ಚೀನಾ ಪಟ್ಟು ಹಿಡಿದಿದೆ.
ಭಾರತ ಎನ್ಎಸ್ ಜಿ ಸಮೂಹಕ್ಕೆ ಸೇರ್ಪಡೆಯಾಗಲು ಸಿದ್ಧವಿದೆ ಆದರೆ ಎನ್ ಪಿ ಟಿಗೆ ಸಹಿ ಹಾಕದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಚೀನಾ, ಎನ್​ಎಸ್​ಜಿಯು ಎನ್​ಪಿಟಿಯ ಬುನಾದಿ ಮೇಲೆ ನಿಂತಿದೆ. ಆದರೆ, ಭಾರತ ಎನ್​ಪಿಟಿಗೆ ಸಹಿ ಹಾಕಿಲ್ಲ. ಹೀಗಿರುವಾಗ ಎನ್​ಎಸ್​ಜಿಗೆ ಸೇರ್ಪಡೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದು, ಒಂದು ವೇಳೆ ಭಾರತಕ್ಕೆ ಪ್ರವೇಶ ನೀಡಿದಲ್ಲಿ, ಪಾಕಿಸ್ತಾನಕ್ಕೂ ಎನ್​ಎಸ್​ಜಿ ಗುಂಪಿಗೆ ಪ್ರವೇಶ ನೀಡಬೇಕಾಗುತ್ತದೆ ಎಂದು ಪಟ್ಟು ಹಿಡಿದಿದೆ.
ಚೀನಾದೊಂದಿಗೆ ಟರ್ಕಿ, ದಕ್ಷಿಣ ಆಫ್ರಿಕಾ, ಟರ್ಕಿ, ನ್ಯೂಜಿಲ್ಯಾಂಡ್, ಐರ್ಲೇಂಡ್, ಆಸ್ಟ್ರಿಯಾ ಭಾರತದ ಸದಸ್ಯತ್ವಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ಈ ರಾಷ್ಟ್ರಗಳ ಪೈಕಿ ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಟರ್ಕಿ ದೇಶಗಳು ಈ ಹಿಂದೆ  ಭಾರತದ ವಿರುದ್ಧ ಹೊಂದಿದ್ದ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದು ಎನ್ ಎಸ್ ಜಿ ಸಮೂಹಕ್ಕೆ ಭಾರತದ ಪ್ರವೇಶ ವಿಷಯದಲ್ಲಿ ರಾಜಿಮಾಡಿಕೊಳ್ಳಲು ಸಿದ್ಧವಿದೆ ಎಂದು ತಿಳಿದುಬಂದಿದೆ.
ಭಾರತವು 1974ರ ಮೇ ತಿಂಗಳಲ್ಲಿ ಮೊದಲ ಬಾರಿ ಅಣ್ವಸ್ತ್ರ ಪರೀಕ್ಷೆ ಮಾಡಿತ್ತು. ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಮುಂದುವರಿದ ರಾಷ್ಟ್ರಗಳು ಎನ್​ಎಸ್​ಜಿಯನ್ನು ಸ್ಥಾಪಿಸಿದವು. ಸದ್ಯ ಈ ಗುಂಪಿನಲ್ಲಿ 48 ರಾಷ್ಟ್ರಗಳಿವೆ. 1978ರಲ್ಲಿ  ಮೊದಲ ಬಾರಿಗೆ ಎನ್ ಎಸ್ ಜಿಯ ಮಾರ್ಗಸೂಚಿ ಸೂತ್ರಗಳು ಪ್ರಕಟಗೊಂಡಿದ್ದವು. ನಂತರದಲ್ಲಿ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಅಣ್ವಸ್ತ್ರ ಪ್ರಸರಣ ತಡೆಯುವುದು ಎನ್ ಎಸ್ ಜಿ ಗುಂಪಿನ ಉದ್ದೇಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com