
ವಾಷಿಂಗ್ಟನ್: ಪಾಕಿಸ್ತಾನ ರಾಷ್ಟ್ರವನ್ನು 'ಭಯೋತ್ಪಾದಕ ರಾಷ್ಟ್ರ'ವೆಂದು ಘೋಷಿಸುವಂತೆ ಅಮೆರಿಕದಲ್ಲಿರುವ ಭಾರತೀಯರು ಶ್ವೇತಭವನದಲ್ಲಿ ಅರ್ಜಿಯೊಂದನ್ನು ಸಲ್ಲಿಕೆ ಮಾಡಿದ್ದಾರೆ.
ಕೆಲ ದಿನಗಳಿ ಹಿಂದಷ್ಟೇ ಅಮೆರಿಕದ ಇಬ್ಬರು ಪ್ರಬಲ ಶಾಸಕರು ಯುಎಸ್ ಕಾಂಗ್ರೆಸ್ ಎದುರು ಪಾಕಿಸ್ತಾನ 'ಭಯೋತ್ಪಾದಕ ರಾಷ್ಟ'ವೆಂದು ಘೋಷಿಸುವಂತೆ ಮಸೂದೆಯೊಂದನ್ನು ಮಂಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಅಮೆರಿಕದಲ್ಲಿರುವ ಭಾರತೀಯರು ಈ ಬಗ್ಗೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ಪಾಕಿಸ್ತಾನ ಭಯೋತ್ಪಾದನಾ ಪ್ರಾಯೋಜಕ ಕಾಯ್ದೆ (ಹೆಚ್ಆರ್ 6069) ಮಸೂದೆಯನ್ನು ಟೆಡ್ ಪೋ ಹಾಗೂ ಡೆಮಾಕ್ರೆಟಿಕ್ ಪಕ್ಷದ ಡಾನಾ ರೋಹ್ರಬಚೆರ್ ಅಮೆರಿಕ ಸಂಸತ್ ನಲ್ಲಿ ಮಂಡಿಸಿದ ಬೆನ್ನಲ್ಲೇ ಭಾರತೀಯ ಅಮೆರಿಕನ್ನರ ಸಮುದಾಯ ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರವೆಂದು ಘೋಷಣೆ ಮಾಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.
ಭಯೋತ್ಪಾದನೆ ಇಂದು ವಿಶ್ವಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಪಾಕಿಸ್ತಾನ ರಾಷ್ಟ್ರ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದ್ದು, ಪರಿಣಾಮ ಸಂಯುಕ್ತ ಅಮೆರಿಕ, ಭಾರತ ಸೇರಿದಂತೆ ಇನ್ನಿತರೆ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಭಾರತೀಯ ಅಮೆರಿಕನ್ನರು ಸಲ್ಲಿಸಿರುವ ಈ ಅರ್ಜಿ ಪ್ರಾಮುಖ್ಯತೆಯನ್ನು ಹೊಂದಿದೆ ಎನ್ನಲಾಗುತ್ತಿದೆ.
ಈ ಹಿಂದೆ ಬರಾಕ್ ಒಬಾಮ ಅವರು ಯಾವುದೇ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಆಡಳಿತದ ಗಮನವನ್ನು ಸೆಳೆಯಲು 'ವೀ ದ ಪೀಪಲ್' ಎಂಬ ಆನ್ ಲೈನ್ ಮನವಿ ಸೇವೆಯ ಶ್ವೇತಭವನದ ವೆಬ್ ಸೈಟ್'ನ್ನು ಆರಂಭಿಸಿದ್ದರು. ಇದನ್ನು ಭಾರತೀಯ ಅಮೆರಿಕನ್ ಸಮುದಾಯ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಆರಂಭಿಸಿದೆ.
ಭಾರತೀಯ ಅಮೆರಿಕನ್ನರು ಸಲ್ಲಿಸಿರುವ ಈ ಅರ್ಜಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ರತಿಕ್ರಿಯೆ ನೀಡಬೇಕಾದರೆ ಅಥವಾ ಸ್ಪಂದನೆ ನೀಡಬೇಕಾದರೆ ಇದಕ್ಕೆ ಕನಿಷ್ಟ 1 ಲಕ್ಷ ಜನರ ಸಹಿಯಾದರೂ ಅಗತ್ಯವಿದೆ.
Advertisement