ಡೋಕ್ಲಾಮ್ ವಿವಾದ: ಭಾರತದ ಮೇಲೆ 'ಸಣ್ಣ ಪ್ರಮಾಣದ' ಮಿಲಿಟರಿ ದಾಳಿ ಮಾಡಲು ಚೀನಾ ಚಿಂತನೆ

ಡೋಕ್ಲಾಮ್ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವಿನ ಉದ್ನಿಗ್ನ ಪರಿಸ್ಥಿತಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟು ಇಂದಿಗೆ 50ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆಯೇ ಡೋಕ್ಲಾಮ್ ನಿಂದ ಭಾರತೀಯ ಯೋಧರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಡೋಕ್ಲಾಮ್ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವಿನ ಉದ್ನಿಗ್ನ ಪರಿಸ್ಥಿತಿ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟು ಇಂದಿಗೆ 50ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆಯೇ ಡೋಕ್ಲಾಮ್ ನಿಂದ ಭಾರತೀಯ ಯೋಧರ ತೆರವಿಗೆ ಚೀನಾ ಸೇನಾ ಸಣ್ಣ ಪ್ರಮಾಣದ ದಾಳಿ ನಡೆಸಬಹುದು ಎಂಬ ಸ್ಫೋಟ ಮಾಹಿತಿ ಇದೀಗ ಬಹಿರಂಗಗೊಂಡಿದೆ.
ಬಿಕ್ಕಿಟ್ಟಿಗೆ 50 ದಿನ ತುಂಬಿದ ಬೆನ್ನಲ್ಲೇ ಚೀನಾ ಸರಣಿಯಾಗಿ ಭಾರತಕ್ಕೆ ಎಚ್ಚರಿಕೆ ನೀಡುವ ಪ್ರಯತ್ನಗಳನ್ನು ಮುಂದುವರೆಸಿದೆ. ಈ ಮೂಲಕ ಡೋಕ್ಲಾಮ್ ನಿಂದ ಭಾರತ ಹಿಂದೆ ಸರಿಯದೇ ಹೋದಲ್ಲಿ ಇನ್ನು ಸಹಿಸಲಾಗದು ಎಂಬ ಎಚ್ಚರಿಕೆ ಸಂದೇಶ ರವಾನಿಸಿದೆ.
ಶಾಂಘೈನಲ್ಲಿನ ಅಕಾಡೆಮಿ ಆಫ್ ಸೋಷಿಯಲ್ ಸೈನ್ಸ್ ನಲ್ಲಿರುವ ಅಂತರಾಷ್ಟ್ರೀಯ ಸಂಬಂಧಗಳ ಸಂಸ್ಥೆಯ ಸಂಶೋಧಕ ಹು ಝಿಯೋಂಗ್ ಅವರ ಹೇಳಿಕೆಯನ್ನು ಆಧರಿಸಿ ಚೀನಾ ಸರ್ಕಾರದ ಮುಖವಾಣಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿಯೊಂದನ್ನು ಪ್ರಕಟಿಸಿದ್ದು, ವರದಿಯಲ್ಲಿ ತನ್ನ ದೇಶದ ಗಡಿಯನ್ನು ಬೇರೆಯವರು ಅತಿಕ್ರಮಣ ಮಾಡುವುದನ್ನು ಚೀನಾ ಎಂದಿಗೂ ಸಹಿಸುವುದಿಲ್ಲ. ಹೀಗಾಗಿ ಮುಂದಿನ 2 ವಾರಗಳಲ್ಲಿ ಡೋಕ್ಲಾಮ್ ಪ್ರದೇಶದಿಂದ ಭಾರತೀಯ ಯೋಧರ ತೆರವಿಗೆ ಚೀನಾ ಸೇನೆ ಸಣ್ಣ ದಾಳಿ ನಡೆಸಬಹುದು ಎಂದು ಹೇಳಿಕೊಂಡಿದೆ.
ಆದರೆ ಇಂಥಹದ್ದೊಂದು ದಾಳಿ ನಡೆಸುವ ಮುನ್ನ ಚೀನಾ ಸರ್ಕಾರ ಈ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ಮಾಡಿತಿ ನೀಡಲಿದೆ ಎಂದು ಹು ಝಿಯೋಂಗ್ ವಿಶ್ಲೇಷಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಡೋಕ್ಲಾಮ್ ವಿವಾದ ಸಂಬಂಧ ಸಂಸತ್ತಿನಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಭಾರತ-ಚೀನಾ ನಡುವಿನ ಗಡಿ ವಿವಾದಕ್ಕೆ ಯುದ್ಧವೇ ಪರಿಹಾರವಲ್ಲ. ಪರಸ್ಪರ ಮಾತುಕತೆಯ ಪರಿಹಾರ. ಒಂದು ವೇಳೆ ಯುದ್ಧ ಸಂಭವಿಸಿದರೂ ಮತ್ತೆ ಶಾಂತಿ, ಸೌಹಾರ್ದ ಸ್ಥಾಪನೆಗೆ ಮಾತುಕತೆಯೇ ಮುಖ್ಯವಾಗುತ್ತದೆ. ಯಾವುದೇ ಸಮಸ್ಯೆಗಳನ್ನು ನಿವಾರಿಸಲು ತಾಳ್ಮೆ ಮುಖ್ಯವಾಗಿದ್ದು, ಒಂದು ವೇಳೆ ತಾಳ್ಮೆ ಕಳೆದುಕೊಂಡರೆ ಇನ್ನೊಂದು ಕಡೆಯಿಂದ ಪ್ರಚೋದನಾತ್ಮಕ ನಡೆ ಉಂಟಾಗಬಹುದು. ಹೀಗಾಗಿ ತಾಳ್ಮೆ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಚೀನಾ ರಕ್ಷಣಾ ಸಚಿವಾಲಯ, ಡೋಕ್ಲಾಮ್ ವಿವಾದದಲ್ಲಿ ಚೀನಾ ಗರಿಷ್ಟ ಸಂಯಮವನ್ನು ತೋರಿಸಿದೆ. ಆದರೆ, ಇದೀಗ ನಮ್ಮ ತಾಳ್ಮೆಯ ಕಟ್ಟೆಯೊಡೆದಿದೆ. ಭಾರತ ಇನ್ನು ತಿಳಿಯಬೇಕಿದ್ದು, ಮೊದಲು ಡೋಕ್ಲಾಮ್ ನಿಂದ ತನ್ನ ಸೇನಾಪಡೆಗಳನ್ನು ಭಾರತ ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲದೇ ಹೋದರೆ, ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. 

ಬಳಿಕ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆಯವರು, ಡೋಕ್ಲಾಮ್ ಬಿಕ್ಕಟ್ಟು ಪರಿಹಾರಕ್ಕೆ ಚೀನಾದೊಂದಿಗೆ ರಾಜತಾಂತ್ರಿಕವಾಗಿ ಸಂಪರ್ಕದಲ್ಲಿದ್ದು, ಭೂತಾನ್ ಜತೆಗೂ ಸಹಕಾರದಿಂದಿದ್ದು ಪರಸ್ಪರ ಒಪ್ಪಿಗೆಯಾಗುವ ಪರಿಹಾರ ಹುಡುಕಲು ಪ್ರಯತ್ನಿಸಲಾಗುತ್ತಿದೆ. ಬಿಕ್ಕಟ್ಟನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಸ್ಪರ ಸ್ವೀಕಾರಾರ್ಹ ಮಾರ್ಗದಲ್ಲಿ ಬಗೆಹರಿಸು ಪ್ರಯತ್ನಿಸಲಾಗುತ್ತದೆ  ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com