ಡೊಕ್ಲಾಮ್ ನಲ್ಲಿ ರಸ್ತೆ ನಿರ್ಮಾಣ ಮಾಡುವ ಹಕ್ಕು ನಮಗಿದೆ: ಚೀನಾದಿಂದ ಮತ್ತೆ ಕ್ಯಾತೆ!

ಸಿಕ್ಕಿಂ ಗಡಿ ವಿವಾದ ಸಂಬಂಧ ಭಾರತ-ಚೀನಾ ನಡುವಿನ ವಾಕ್ಸಮರ ಮುಂದುವರೆದಿದ್ದು, ಗಡಿ ವಿವಾದ ಸಂಬಂಧ ಮತ್ತೆ ಖ್ಯಾತೆ ತೆಗೆದಿರುವ ಚೀನಾ ಡೋಕ್ಲಾಮ್ ನಮ್ಮದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಸಿಕ್ಕಿಂ ಗಡಿ ವಿವಾದ ಸಂಬಂಧ ಭಾರತ-ಚೀನಾ ನಡುವಿನ ವಾಕ್ಸಮರ ಮುಂದುವರೆದಿದ್ದು, ಗಡಿ ವಿವಾದ ಸಂಬಂಧ ಮತ್ತೆ ಖ್ಯಾತೆ ತೆಗೆದಿರುವ ಚೀನಾ ಡೋಕ್ಲಾಮ್ ನಮ್ಮದು, ನಮ್ಮ ಭೂಮಿಯಲ್ಲಿ ರಸ್ತೆ ನಿರ್ಮಾಣ ಮಾಡುವ ಕಾನೂನುಬದ್ಧವಾದ ಹಕ್ಕು ನಮಗಿದೆ ಎಂದು ಮಂಗಳವಾರ ಹೇಳಿದೆ. 
ಡೋಕ್ಲಾಮ್ ವಿವಾದ ಸಂಬಂಧ ಭಾರತೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಸೀನಿಯರ್ ಕರ್ನಲ್ ರೆನ್ ಗುವಾಕಿಯಾಂಗ್ ಅವರು, ಭಾರತೀಯ ಯೋಧರ ತೆರವಿಗೆ ಚೀನಾ 2 ವಾರಗಳಲ್ಲಿ ಸೇನಾ ಸಣ್ಣ ಪ್ರಮಾಣದ ದಾಳಿ ನಡೆಸಬಹುದು ಎಂಬ ವರದಿಗಳ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇದೇ ವೇಳೆ ವಿವಾದಿತ ಗಡಿ ಪ್ರದೇಶದಿಂದ ಭಾರತ ಮೊದಲು ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಹೇಳಿದ್ದಾರೆ. 
ಈ ರೀತಿಯ ವರದಿಗಳು ತಜ್ಞರು ನೀಡಿದ ಹೇಳಿಕೆಗಳು ಆಧಾರ ಮೇರೆಗೆ ಮಾಧ್ಯಮಗಳು ವರದಿ ಮಾಡಿವೆ. ಯಾವುದೇ ವಿಚಾರ ಸಂಬಂಧ ಅಧಿಕೃತ ಮಾಹಿತಿಗಳನ್ನು ವಿದೇಶಾಂಗ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯಗಳಿಂದ ಪಡೆದುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 
ಡೋಕ್ಲಾಮ್' ಚೀನಾಗೆ ಸೇರಿದ್ದಾಗಿದ್ದು, ಅಲ್ಲಿ ರಸ್ತೆ ನಿರ್ಮಾಣ ಮಾಡಲು ಎಲ್ಲಾ ರೀತಿಯ ಕಾನೂನುಬದ್ಧ ಹಕ್ಕುಗಳನ್ನು ಹೊಂದಿದ್ದೇವೆ. ಆದರೆ, ಇದಕ್ಕೆ ಭಾರತೀಯ ಸೇನೆ ಅಡ್ಡಿಪಡಿಸುತ್ತಿದೆ. ಚೀನಾ ಗಡಿ ಪ್ರದೇಶವನ್ನು ಭಾರತೀಯ ಸೇನೆ ಪ್ರವೇಶ ಮಾಡಿದ್ದು, ಮೊದಲು ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಿದೆ. 
ರಸ್ತೆ ನಿರ್ಮಾಣ ಮಾಡುತ್ತಿರುವ ಕುರಿತಂತೆ ಮೇ.18 ರಂದೇ ಭಾರತಕ್ಕೆ ನಾವು ಎರಡು ಬಾರಿ ಮಾಹಿತಿ ನೀಡಿದ್ದೆವು. ಜೂನ್.8 ರಂದು ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದೆವು. ಬಿಕ್ಕಟ್ಟುಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ಗಡಿ ಕುರಿತು ಭಾರತ-ಚೀನಾ ನಡುವೆ ನಡೆದ ಸಭೆಯಲ್ಲಿ ಭಾರತಕ್ಕೆ ಮಾಹಿತಿ ನೀಡಿದ್ದೆವು. ಆಗೇಕೆ ಭಾರತ ಮೌನವಾಗಿತ್ತು ಎಂದು ಪ್ರಶ್ನಿಸಿದ್ದಾರೆ. 
ಇದೇ ವೇಳೆ ವಿಶ್ವಸಂಸ್ಥೆಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಹಾಗೂ ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ಪ್ರಮುಖ ರುವಾರಿ ಮಸೂದ್ ಆಝರ್ ನನ್ನು ಜಾಗತಿಕ ಉಗ್ರನೆಂದು ಘೋಷಣೆ ಮಾಡುವುದನ್ನು ತಡೆಯಲು ಪಾಕಿಸ್ತಾನಕ್ಕೆ ಬೆಂಬಲ ನೀಡಿರುವುದು ಹಾಗೂ 50 ಬಿಲಿಯನ್ ಡಾಲರ್ ಮೊತ್ತದ ಯೋಜನೆಯಾದ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ ರೂಪಿಸಿರುವ ಚೀನಾ, ವಿಸ್ತಾರವಾದಿ ದೇಶ ಮತ್ತು ಹಿಂಸಾತ್ಮಕತೆ ಶಕ್ತಿಯನ್ನು ಹೊಂದಿರುವ ದೇಶವೆಂಬ ಆರೋಪಗಳನ್ನು ತಿರಸ್ಕರಿಸುವ ರೆನ್ ಗುವಾಕಿಯಾಂಗ್, ಈ ಗುಣ ನಮ್ಮ ರಕ್ತದಲ್ಲಿಯೇ ಇಲ್ಲ ಎಂದಿದ್ದಾರೆ. 
ಡೋಕ್ಲಾಮ್ ಬಿಕ್ಕಿಟ್ಟು ಸಂಬಂಧಿಸಿದಂತೆ ಚೀನಾ ಸರಣಿಯಾಗಿ ಭಾರತಕ್ಕೆ ಎಚ್ಚರಿಕೆ ನೀಡುವ ಪ್ರಯತ್ನಗಳನ್ನು ಮುಂದುವರೆಸಿದೆ.  
ಕೆಲ ದಿನಗಳ ಹಿಂದಷ್ಟೇ ಶಾಂಘೈನಲ್ಲಿನ ಅಕಾಡೆಮಿ ಆಫ್ ಸೋಷಿಯಲ್ ಸೈನ್ಸ್ ನಲ್ಲಿರುವ ಅಂತರಾಷ್ಟ್ರೀಯ ಸಂಬಂಧಗಳ ಸಂಸ್ಥೆಯ ಸಂಶೋಧಕ ಹು ಝಿಯೋಂಗ್ ಅವರ ಹೇಳಿಕೆಯನ್ನು ಆಧರಿಸಿ ಚೀನಾ ಸರ್ಕಾರದ ಮುಖವಾಣಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿಯೊಂದನ್ನು ಪ್ರಕಟಿಸಿತ್ತು. 
ವರದಿಯಲ್ಲಿ ತನ್ನ ದೇಶದ ಗಡಿಯನ್ನು ಬೇರೆಯವರು ಅತಿಕ್ರಮಣ ಮಾಡುವುದನ್ನು ಚೀನಾ ಎಂದಿಗೂ ಸಹಿಸುವುದಿಲ್ಲ. ಹೀಗಾಗಿ ಮುಂದಿನ 2 ವಾರಗಳಲ್ಲಿ ಡೋಕ್ಲಾಮ್ ಪ್ರದೇಶದಿಂದ ಭಾರತೀಯ ಯೋಧರ ತೆರವಿಗೆ ಚೀನಾ ಸೇನೆ ಸಣ್ಣ ದಾಳಿ ನಡೆಸಬಹುದು ಎಂದು ಹೇಳಿಕೊಂಡಿತ್ತು. ಆದರೆ ಇಂಥಹದ್ದೊಂದು ದಾಳಿ ನಡೆಸುವ ಮುನ್ನ ಚೀನಾ ಸರ್ಕಾರ ಈ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಲಿದೆ ಎಂದು ಹು ಝಿಯೋಂಗ್ ವಿಶ್ಲೇಷಿಸಿದ್ದಾರೆಂದು ತಿಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com