
ಲಂಡನ್: ಚೀನಾ ಮತ್ತು ಪಾಕಿಸ್ತಾನ ನಡುವಿನ ವಿವಾದಾತ್ಮಕ ಆರ್ಥಿಕ ಕಾರಿಡಾರ್ ಯೋಜನೆಗೆ ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯದ ನಾಗರಿಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು, ಲಂಡನ್ ನಲ್ಲಿರುವ ಚೀನಾ ರಾಯಭಾರ ಕಚೇರಿ ಎದುರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.
ವರ್ಲ್ಡ್ ಬಲೂಚ್ ಆರ್ಗನೈಜೇಷನ್ ಸಂಘಟನೆಯ ಕಾರ್ಯಕರ್ತರು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಸಿಂಧಿ ನಾಗರೀಕರೂ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಚೀನಾ ಮತ್ತು ಪಾಕಿಸ್ತಾನ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ಪ್ರತಿಭಟನಾಕಾರರು, ಸಿಪಿಇಸಿ ಬೇಡವೇ ಬೇಡ ಎಂದು ಆಗ್ರಹಿಸಿದ್ದಾರೆ. ಈ ಹಿಂದೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ವಿವಾದಿತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ -ಬಾಲ್ಟಿಸ್ತಾನ್ ನಲ್ಲಿ ಸುಮಾರು 51.5 ಬಿಲಿಯನ್ ಕೋಟಿ ರು.ವೆಚ್ಚದಲ್ಲಿ ಆರ್ಥಿಕ ಕಾರಿಡಾರ್ ನಿರ್ಮಾಣ ಮಾಡುತ್ತಿದೆ. ಪಿಒಕೆಯ ಕಶ್ಗರ್ ನಿಂದ ಚೀನಾದ ಕ್ಸಿಂಜಿಯಾಂಗ್ ಪ್ರಾಂತ್ಯದವರೆಗೂ ಈ ಆರ್ಥಿಕ ಕಾರಿಡಾರ್ ನಿರ್ಮಾಣವಾಗುತ್ತಿದ್ದು, ಚೀನಾ ಮತ್ತು ಪಾಕಿಸ್ತಾನ ನಡುವಿನ ವಾಣಿಜ್ಯ ಉದ್ದೇಶಕ್ಕಾಗಿ ಈ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ.
ರಸ್ತೆ, ರೈಲು ಸಂಚಾರಕ್ಕಾಗಿ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಬಲೂಚಿಸ್ತಾನದಿಂದ ಅಲ್ಲಿನ ಮೂಲ ನಿವಾಸಿಗಳನ್ನು ತೆರವುಗೊಳಿಸುವ ಉದ್ದೇಶದಿಂದಲೇ ಈ ವಿವಾದಿತ ಆರ್ಥಿಕ ಕಾರಿಡಾರ್ ಯೋಜನೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಬಲೂಚ್ ಪ್ರಾಂತ್ಯದಲ್ಲಿ ಸಿಪಿಇಸಿಗೆ ದಿನೇ ದಿನೇ ವಿರೋಧ ಹೆಚ್ಚಾಗುತ್ತಿದ್ದರೂ ಈ ಬಗ್ಗೆ ತನಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವ ಪಾಕಿಸ್ತಾನ ಹಾಗೂ ಚೀನಾ ದೇಶಗಳು ತಮ್ಮ ಯೋಜನೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವರಲ್ಲಿ ನಿರತರಾಗಿದ್ದಾರೆ.
ಇತ್ತ ದಿನೇ ದಿನೇ ಬಲೂಚಿ ಪ್ರಾಂತ್ಯದಲ್ಲಿನ ಮೂಲ ನಿವಾಸಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಪಾಕಿಸ್ತಾನ ಸೇನೆಯ ಹಿಂಸಾಚಾರದಿಂದಾಗಿ ಇಲ್ಲಿನ ಮೂಲ ನಿವಾಸಿಗಳು ಬಲೂಚ್ ಪ್ರಾಂತ್ಯವನ್ನು ತೊರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮ್ಮ ಸ್ಥಳದಲ್ಲೇ ಬಲೂಚ್ ನಾಗರಿಕರು ಅಲ್ಪ ಸಂಖ್ಯಾತರಾಗಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
Advertisement