ಮಾತುಕತೆ ಸಾಧ್ಯವಿಲ್ಲ, ಭಾರತ ಮೊದಲು ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲಿ: ಚೀನಾ

ಸಿಕ್ಕಿಂ ಗಡಿಯಲ್ಲಿ ಬರುವ ಡೋಕ್ಲಾಮ್ ಗಡಿ ವಿವಾದ ಆರಂಭವಾದಾಗಿನಿಂದಲೂ ಭಾರತದ ವಿರುದ್ಧ ಒಂದಲ್ಲ ಒಂದು ರೀತಿ ಕತ್ತಿ ಮಸೆಯುತ್ತಿರುವ ಚೀನಾದ ಸರ್ಕಾರಿ ಮುಖವಾಣಿ ಪತ್ರಿಕೆಗಳು, ಸುದ್ದಿಸಂಸ್ಥೆಗಳು ಇದೀಗ ಮತ್ತೊಮ್ಮೆ ಭಾರತಕ್ಕೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಸಿಕ್ಕಿಂ ಗಡಿಯಲ್ಲಿ ಬರುವ ಡೋಕ್ಲಾಮ್ ಗಡಿ ವಿವಾದ ಆರಂಭವಾದಾಗಿನಿಂದಲೂ ಭಾರತದ ವಿರುದ್ಧ ಒಂದಲ್ಲ ಒಂದು ರೀತಿ ಕತ್ತಿ ಮಸೆಯುತ್ತಿರುವ ಚೀನಾದ ಸರ್ಕಾರಿ ಮುಖವಾಣಿ ಪತ್ರಿಕೆಗಳು, ಸುದ್ದಿಸಂಸ್ಥೆಗಳು ಇದೀಗ ಮತ್ತೊಮ್ಮೆ ಭಾರತಕ್ಕೆ ಎಚ್ಚರಿಕೆ ನೀಡಿವೆ. 
ಡೋಕ್ಲಾಮ್ ವಿವಾದಕ್ಕೆ ಸಂಬಂಧಿಸಿದಂತೆ ಹಾಲಿ ಪರಿಸ್ಥಿತಿಯಲ್ಲಿ ಯಾವುದೇ ಮಾತುಕತೆ ಸಾಧ್ಯವೇ ಇಲ್ಲ, ಮೊದಲು ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ನಂತರವಷ್ಟೇ ಗಡಿ ಬಿಕ್ಕಟ್ಟಿನ ಕುರಿತು ಮಾತುಕತೆ ನಡೆಸುತ್ತೇವೆಂದು ಸ್ಪಷ್ಟಪಡಿಸಿದೆ. 
ನಾಲ್ಕು ದಿನಗಳ ಹಿಂದಷ್ಟೇ ಡೋಕ್ಲಾಮ್ ಗಡಿ ವಿವಾದ ಸಂಬಂಧ ಹೇಳಿಕೆ ನೀಡಿದ್ದ ಭಾರತದ ವಿದೇಶಾಂಗ ಸಚಿವಾಲಯ, ಗಡಿ ವಿವಾದ ಬಗೆಹರಿಸಿಕೊಳ್ಳಲು ಉಭಯ ರಾಷ್ಟ್ರಗಳ ಮುಂದೆ ರಾಜತಾಂತ್ರಿಕ ಅವಕಾಶಗಳು ಮುಕ್ತವಾಗಿದೆ ಎಂದು ಹೇಳಿತ್ತು. 
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾದ ಕ್ಸಿನ್ಹುವಾ ಸುದ್ದಿಸಂಸ್ಥೆ, 'ಪೂರ್ವ ಷರತ್ತು ಇಲ್ಲದೆ, ಡೋಕ್ಲಾಮ್ ನಿಂದ ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವವರೆಗೂ ರಾಜತಾಂತ್ರಿಕ ಮಾತುಕತೆಗೆ ಅವಕಾಶವೇ ಇಲ್ಲ'. ಮೊದಲು ಡೋಕ್ಲಾಮ್ ನಲ್ಲಿ ನಿಯೋಜನೆ ಮಾಡಲಾಗಿರುವ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳಿ ಎಂಬ ಚೀನಾದ ಆಗ್ರಹಕ್ಕೆ ಭಾರತ ಕಿವುಡುತನ ಪ್ರದರ್ಶಿಸುತ್ತಿದೆ ಇದು ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದೆ. 
2013, 2014ರಲ್ಲಿ ಲಡಾಕ್ ನಲ್ಲಿ ಉಭಯ ದೇಶಗಳ ನಡುವೆ ಉಂಟಾಗಿದ್ದ ಬಿಕ್ಕಟ್ಟಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಭಾರತ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಲಡಾಕ್ ವಿಷಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದಾಗ ರಾಜತಾಂತ್ರಿಕ ಮಾರ್ಗಗಳ ಮೂಲಕ ಬಿಕ್ಕಟ್ಟನ್ನು ನಿವಾರಿಸಲಾಗಿತ್ತು. ಆದರೆ, ಇದೀಗ ಪರಿಸ್ಥಿತಿ ಭಿನ್ನವಾಗಿದೆ. ಹೀಗಾಗಿ ಚೀನಾದ ಸಾಕಷ್ಟು ಎಚ್ಚರಿಕೆಯ ಹೊರತಾಗಿಯೂ ಭಾರತ ತನ್ನ ಮೊಂಡುತನ ಪ್ರದರ್ಶಿಸಿದರೆ, ಭಾರತ ಮತ್ತೊಮ್ಮೆ ಭಾರೀ ಮುಖಭಂಗಕ್ಕೆ ಒಳಗಾಗಬೇಕಾದೀತು ಎಂದು ಸುದ್ದಿ ಸಂಸ್ಥೆ ಎಚ್ಚರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com