'ರಾಕೆಟ್ ದಾಳಿಯಿಂದ 158 ಭಾರತೀಯ ಯೋಧರ ಹತ್ಯೆ': ಪಾಕ್ ಸುಳ್ಳು ವರದಿಗಳ ವಿರುದ್ದ ಚೀನಾ ಕಿಡಿ
ಡೋಕ್ಲಾಮ್ ವಿವಾದ ಸಂಬಂಧ ಭಾರತದ ಮೇಲೆ ಚೀನಾ ರಾಕೆಟ್ ದಾಳಿ ನಡೆಸಿದ್ದು, 158 ಭಾರತೀಯ ಯೋಧರನ್ನು ಹತ್ಯೆ ಮಾಡಿದೆ ಎಂಬ ಪಾಕಿಸ್ತಾನದ ವರದಿಗಳ ವಿರುದ್ಧ ಚೀನಾ ತೀವ್ರವಾಗಿ ಕಿಡಿಕಾರಿದೆ...
ಬೀಜಿಂಗ್: ಡೋಕ್ಲಾಮ್ ವಿವಾದ ಸಂಬಂಧ ಭಾರತದ ಮೇಲೆ ಚೀನಾ ರಾಕೆಟ್ ದಾಳಿ ನಡೆಸಿದ್ದು, 158 ಭಾರತೀಯ ಯೋಧರನ್ನು ಹತ್ಯೆ ಮಾಡಿದೆ ಎಂಬ ಪಾಕಿಸ್ತಾನದ ವರದಿಗಳ ವಿರುದ್ಧ ಚೀನಾ ತೀವ್ರವಾಗಿ ಕಿಡಿಕಾರಿದೆ.
ಪಾಕಿಸ್ತಾನ ಸುಳ್ಳು ವರದಿಗಳನ್ನು ಚೀನಾದ ಸರ್ಕಾರಿ ಸುದ್ದಿಸಂಸ್ಥೆಗಳು ತಳ್ಳಿಹಾಕಿದ್ದು, ಭಾರತದ ಮೇಲೆ ಚೀನಾ ಯಾವುದೇ ರಾಕೆಟ್ ದಾಳಿಯನ್ನು ನಡೆಸಿಲ್ಲ. ಪಾಕಿಸ್ತಾನದ ವರದಿಗಳು ಆಧಾರರಹಿತವಾಗಿದ್ದು, ಪಾಕಿಸ್ತಾನದ ಈ ವರದಿಗಳನ್ನು ಗಂಭೀರವಾಗಿ ಪರಿಗಣಿಸಬಾರದುಎಂದು ಹೇಳಿವೆ.
ಸಿಕ್ಕಿಂ ಗಡಿ ವಿವಾದ ಸಂಬಂಧ ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಬಿಕ್ಕಟ್ಟು ಕುರಿತಂತೆ ಕಳೆದೆರಡು ದಿನಗಳ ಹಿಂದಷ್ಟೇ ವರದಿ ಮಾಡಿದ್ದ ಪಾಕಿಸ್ತಾನದ ಮಾಧ್ಯಮಗಳು, ಡೋಕ್ಲಾಮ್ ಗಡಿ ವಿವಾದ ಸಂಬಂಧ ಗಡಿಯಲ್ಲಿ ಚೀನಾ ಭಾರತದ ಮೇಲೆ ರಾಕೆಟ್ ದಾಳಿ ನಡೆಸಿದ್ದು, ದಾಳಿಯಲ್ಲಿ 150 ಭಾರತೀಯ ಯೋಧರು ಸಾವನ್ನಪ್ಪಿದ್ದಾರೆಂದು ವರದಿಗಳನ್ನು ಮಾಡಿತ್ತು.
ರಾಕೆಟ್ ದಾಳಿಗೆ ಹಲವಾರು ಭಾರತೀಯ ಯೋಧರು ಗಾಯಗೊಂಡಿದೆ ಎಂದು ಹೇಳಿಕೊಂಡಿತ್ತು. ಅಲ್ಲದೆ, 2 ನಿಮಿಷಗಳ ವಿಡಿಯೋ ತುಣುಕನ್ನು ಪಾಕಿಸ್ತಾನ ಮಾಧ್ಯಮಗಳು ತೋರಿಸಿತ್ತು. ಚೀನಾದ ಕೇಂದ್ರೀಯ ಮಾಧ್ಯಮವೊಂದು ಈ ವಿಡಿಯೋವನ್ನು ಪ್ರಸಾರ ಮಾಡಿದ್ದು, ಭಾರತೀಯ ಯೋಧರ ಮೇಲೆ ಚೀನಾ ರಾಕೆಟ್ ಲಾಂಚರ್, ಮಷಿನ್ ಗನ್ ಹಾಗೂ ಮಾರ್ಟರ್ ಗಳನ್ನು ಬಳಸಿ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ತಮ್ಮ ವರದಿಯಲ್ಲಿ ಹೇಳಿಕೊಂಡಿತ್ತು.
ಪಾಕಿಸ್ತಾನ ಮಾಧ್ಯಮಗಳ ಈ ವರದಿಗಳನ್ನು ನಿನ್ನೆಯಷ್ಟೇ ಭಾರತ ಕೂಡ ತಳ್ಳಿಹಾಕಿತ್ತು. ಪಾಕಿಸ್ತಾನದ ಈ ವರದಿಗಳು ಆಧಾರ ರಹಿತವಾಗಿದ್ದು, ದ್ವೇಷಪೂರಿತ ಹಾಗೂ ಹಾನಿಕಾರಕ ವರದಿಗಳಾಗಿವೆ. ಅರಿವಿಲ್ಲದವರಷ್ಟೇ ಇಂತಹ ವರದಿಗಳನ್ನು ಮಾಡಿರುವ ಮಾಧ್ಯಮವನ್ನು ಜವಾಬ್ದಾರಿಯುತ ಮಾಧ್ಯಮವೆಂದು ಪರಿಗಣಿಸುತ್ತಾರೆಂದು ಹೇಳಿತ್ತು.