ಡೋಕ್ಲಾಮ್: ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ ಯೋಧರ ಹತ್ಯೆ- ಚೀನಾ ಮಾಜಿ ರಾಯಭಾರಿ

ಸಿಕ್ಕಿಂ ಸಮೀಪದ ಡೋಕ್ಲಾಮ್ ನಲ್ಲಿ ಭಾರತ ಮಾಡಿರುವುದು ಅತಿಕ್ರಮಣವಾಗಿದ್ದು, ಕೂಡಲೇ ಭಾರತ ಸ್ವಯಂಪ್ರೇರಿತವಾಗಿ ತಮ್ಮ ಗಡಿಯೊಳಗೆ ವಾಪಸ್ ಹೋಗಬೇಕು, ಇಲ್ಲವೇ ಯೋಧರನ್ನು ಹತ್ಯೆ ಮಾಡಲಾಗುತ್ತದೆ ಎಂದು ಚೀನಾ ಬೆದರಿಕೆ ಹಾಕಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಸಿಕ್ಕಿಂ ಸಮೀಪದ ಡೋಕ್ಲಾಮ್ ನಲ್ಲಿ ಭಾರತ ಮಾಡಿರುವುದು ಅತಿಕ್ರಮಣವಾಗಿದ್ದು, ಹೀಗಾಗಿ ಭಾರತ ಸ್ವಯಂಪ್ರೇರಿತವಾಗಿ ತಮ್ಮ ಗಡಿಯೊಳಗೆ ವಾಪಸ್ ಹೋಗಬೇಕು, ಇಲ್ಲವೇ ಭಾರತೀಯ ಯೋಧರನ್ನು ಬಂಧಿಸಲಾಗುತ್ತದೆ ಅಥವಾ ಹತ್ಯೆ ಮಾಡಲಾಗುತ್ತದೆ ಎಂದು ಚೀನಾದ ಮಾಜಿ ರಾಯಭಾರಿ ಬೆದರಿಕೆ ಹಾಕಿದ್ದಾರೆ.

ಡೋಕ್ಲಾಮ್ ವಿವಾದ ಕುರಿತಂತೆ ಚೀನಾದ ಮಾಜಿ ರಾಯಭಾರಿ, ಮುಂಬೈನಲ್ಲಿನ ಚೀನಾ ದೂತವಾಸ ಕಚೇರಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಲಿಯು ಯೂಫಾ ಅವರು ಚೀನಾ ಸರ್ಕಾರಿ ಸ್ವಾಮ್ಯದ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದು, ಡೋಕ್ಲಾಮ್ ಗಡಿಯಲ್ಲಿ ಭಾರತ ಮಾಡಿರುವುದು ಅತಿಕ್ರಮಣವಾಗಿದೆ. ಹೀಗಾಗಿ ಭಾರತವೇ ಸ್ವಯಂ ಪ್ರೇರಿತವಾಗಿ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲದೇ ಹೋದರೆ ಅವರು ಬಂಧನಕ್ಕೊಳಗಾಗಬೇಕಾಗುತ್ತದೆ ಅಥವಾ ಹತ್ಯೆಗೀಡಾಗಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. 

ಅಂತರಾಷ್ಟ್ರೀಯ ಕಾನೂನಿನ ಪ್ರಕಾರ, ಸಮವಸ್ತ್ರದಲ್ಲಿರುವ ಒಂದು ದೇಶದ ಯೋಧರು ಮತ್ತೊಂದು ದೇಶದ ಗಡಿಯೊಳಗೆ ಕಾಲಿಟ್ಟರೇ ಸಹಜವಾಗಿಯೇ ಅವರು ಶತ್ರುಗಳಾಗಿಬಿಡುತ್ತಾರೆ. ಅಂತಹ ಸಂದರ್ಭದಲ್ಲಿ ಅವರು ಮೂರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಗಡಿಯೊಳಕ್ಕೆ ಕಾಲಿಟ್ಟ ಯೋಧರು ಸ್ವಯಂಪ್ರೇರಿತವಾಗಿ ವಾಪಸ್ ಹೋಗಬೇಕು. ಇಲ್ಲದಿದ್ದರೆ, ಅವರನ್ನು ಬಂಧಿಸಬಹುದು. ಒಂದು ವೇಳೆ ಗಡಿ ವಿವಾದ ತೀವ್ರಗೊಂಡಿದ್ದೇ ಆದರೆ, ಅವರನ್ನು ಹತ್ಯೆ ಮಾಡಲೂ ಬಹುದು ಎಂದು ತಿಳಿಸಿದ್ದಾರೆ. 

ನಿನ್ನೆಯಷ್ಟೇ ಡೋಕ್ಲಾಮ್ ವಿವಾದ ಸಂಬಂಧ ರಾಜ್ಯಸಭೆಯಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಬೆದರಿಕೆಗಳಿಗೆ ಭಾರತ ಬಗ್ಗುವುದಿಲ್ಲ, ಸ್ವರಕ್ಷಣೆಗೆ ಭಾರತ ಸಮರ್ಥವಾಗಿದೆ. ಚೀನಾ ಮೊದಲು ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಿ. ಸಿಕ್ಕಿಂನ ಡೋಕ್ಲಾಮ್ ಪ್ರದೇಶದಲ್ಲಿರುವ ವಿವಾದಿತ ಪ್ರದೇಶ ತ್ರಿರಾಷ್ಟ್ರ (ಭಾರತ-ಚೀನಾ-ಭೂತಾನ್)ಕ್ಕೆ ಸಂಬಂಧಿಸಿದ್ದು, ಆದರೆ, ಚೀನಾ ತ್ರಿರಾಷ್ಟ್ರ ಗಡಿ ಸಂಧಿ ಸ್ಥಳದ ಯಾಥಾಸ್ಥಿತಿಯನ್ನು ಮಾರ್ಪಾಡು ಮಾಡಲು ಯತ್ನಿಸುತ್ತಿದೆ. ಒಂದು ವೇಳೆ ಈ ಪ್ರಯತ್ನದಲ್ಲಿ ಚೀನಾ ಸಫಲವಾಗಿದ್ದೇ ಆದರೆ, ಭಾರತ ಭದ್ರತೆಗೆ ಬೆದರಿಕೆಗಳು ಎದುರಾಗಲಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com