ಜನಾಂಗೀಯ ದ್ವೇಷ ದಾಳಿ ಸಂತ್ರಸ್ತರಿಗೆ ಶೀಘ್ರ ನ್ಯಾಯ: ಅಮೆರಿಕ ಭರವಸೆ

ಅಮೆರಿಕದಲ್ಲಿರುವ ಭಾರತೀಯರ ಮೇಲಾಗುತ್ತಿರುವ ಜನಾಂಗೀಯ ದಾಳಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ದಾಳಿಗೊಳಗಾದ ಸಂತ್ರಸ್ತರಿಗೆ ಶೀಘ್ರಗತಿಯಲ್ಲಿ ನ್ಯಾಯ ದೊರಕಿಸಿಕೊಡುವುದಾಗಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಅಮೆರಿಕದಲ್ಲಿರುವ ಭಾರತೀಯರ ಮೇಲಾಗುತ್ತಿರುವ ಜನಾಂಗೀಯ ದಾಳಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಜನಾಂಗೀಯ ದ್ವೇಷ ದಾಳಿಗೊಳಗಾದ ಸಂತ್ರಸ್ತರಿಗೆ ಶೀಘ್ರಗತಿಯಲ್ಲಿ ನ್ಯಾಯ ದೊರಕಿಸಿಕೊಡುವುದಾಗಿ ಅಮೆರಿಕ ಸೋಮವಾರ ಭರವಸೆ ನೀಡಿದೆ. 
ದೌರ್ಜನ್ಯಕ್ಕೊಳಗಾದವರ ಪರವಾಗಿರುವ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಹಾಗೂ ಅಮೆರಿಕದ ಫೆಡರಲ್ ಸರ್ಕಾರಗಳು ದಾಳಿ ಕುರಿತಂತೆ ಸಂತಾಪ ವ್ಯಕ್ತಪಡಿಸಿದ್ದು, ಪ್ರಕರಣ ಸಂಬಂಧ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಶೀಘ್ರಗತಿಯಲ್ಲಿ ನ್ಯಾಯ ದೊರಕಿಸಿಕೊಡುವುದಾಗಿ ತಿಳಿಸಿವೆ ಎಂದು ಅಮೆರಿದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ತಿಳಿಸಿದೆ. 
ಅಮೆರಿಕದಲ್ಲಿರುವ ಭಾರತದ ರಾಯಭಾರಿ ನವತೇಜ್ ಸರ್ನಾ ಶ್ವೇತಭವನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಈ ವೇಳೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಹಾರ್ದಿಶ್ ಪಟೇಲ್ ಹಾಗೂ ದೀಪ್ ರಾಯ್ ಮೇಲಾದ ಮಾರಾಣಾಂತಿಕ ಹಲ್ಲೆ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿದ್ದರು ಎಂದಿದ್ದಾರೆ. ಭಾರತೀಯ ಮೇಲೆ ನಡೆಯುತ್ತಿರುವ ದಾಳಿಯನ್ನು ನಿಯಂತ್ರಿಸಲು ಅಮೆರಿಕದಲ್ಲಿರುವ ಭಾರತೀಯರಿಗೆ ರಕ್ಷಣೆ ನೀಡುವಂತೆ ತಿಳಿಸಲಾಗಿದೆ. ಈ ಸಂಬಂಧ ಭಾರತೀಯ ರಾಯಭಾರ ಕಚೇರಿ ಅಮೆರಿಕದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ. 
ಅಮೆರಿಕದಲ್ಲಿ ಭಾರತೀಯ ಮೇಲೆ ಜನಾಂಗೀಯ ದ್ವೇಷ ಸರಣಿ ದಾಳಿಗಳು ಮುಂದುವರೆದಿದೆ. ನಿನ್ನೆಯಷ್ಟೇ ದೀಪ್ ರಾಯ್ ಎಂಬ ಸಿಖ್ ವ್ಯಕ್ತಿ ಮೇಲೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ದಾಳಿ ವೇಳೆ ನಿನ್ನ ದೇಶಕ್ಕೆ ನೀನು ಹೋಗು ಎಂದು ಕೂಗಿದ್ದ. ಅದೃಷ್ಟವಶಾತ್ ದೀಪ್ ರಾಯ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆಘಾತಕಾರಿ ಅಂಶವೆಂದರೆ ಕಳೆದ 2 ವಾರದಲ್ಲಿ ಭಾರತೀಯರ ಮೇಲೆ ನಡೆದ 5ನೇ ಜನಾಂಗೀಯ ದ್ವೇಷದ ದಾಳಿ ಇದಾಗಿತ್ತು. 
ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನಿವಾಸ್ ಕುಚಿಬೋಟ್ಲಾ ಅವರನ್ನು ಹತ್ಯೆ ಮಾಡಲಾಗಿತ್ತು. ನಂತರ ಉದ್ಯಮಿ ಹಾರ್ನಿಷ್ ಪಟೇಲ್ ರನ್ನು ಅಮೆರಿಕದಲ್ಲಿ ಹತ್ಯೆ ಮಾಡಲಾಗಿತ್ತು. ಇದಲ್ಲದೆ, ಭಾರತೀಯರೆಂಬ ಕಾರಣಕ್ಕೆ ನಿಂದಿಸಿದ ಕೆಲ ಪ್ರಕರಣಗಳೂ ಕೂಡ ವರದಿಯಾಗಿತ್ತು. ನಿನ್ನೆ ನಡೆದ ದಾಳಿ ಅಮೆರಿಕದಲ್ಲಿರುವ ಭಾರತೀಯರ ಭೀತಿಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 
ತನಿಖೆಗೆ ಕೈಜೋಡಿಸಿದ ಎಫ್'ಬಿಐ
ಅಮೆರಿಕದಲ್ಲಿ ನಡೆಯುತ್ತಿರುವ ಭಾರತೀಯ ಮೇಲಿನ ಜನಾಂಗೀಯ ದ್ವೇಷ ದಾಳಿ ಪ್ರಕರಣಗಳನ್ನು ಈಗಾಗಲೇ ಕೆಂಟ್ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದು, ತನಿಖೆಯೊಂದಿಗೆ ಇದೀಗ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್'ಬಿಐ) ಕೈಜೋಡಿಸಿದೆ. 
ಎಫ್'ಬಿಐ ಉನ್ನತ ಮಟ್ಟದ ತನಿಖಾ ಸಂಸ್ಥೆಯಾಗಿದೆ. ಕೆಂಟ್ ಪೊಲೀಸ್ ಇಲಾಖೆ ನಡೆಸುತ್ತಿರುವ ತನಿಖೆಯೊಂದಿಗೆ ಇದೀಗ ಎಫ್'ಬಿಐ ಕೂಡ ಕೈಜೋಡಿಸಿದ್ದು, ಸಂಭವನೀಯ ದ್ವೇಷಪೂರಿತ ದಾಳಿಗಳಿಗೆ ಕಾರಣವಾಗುವ ಅಪರಾಧಗಳ ವಿರುದ್ಧ ಎಫ್'ಬಿಐ ಇದ್ದು, ಈ ಕುರಿತ ನಮ್ಮ ಕೆಲಸವನ್ನು ನಾವು ಮುಂದುವರೆಸುತ್ತೇವೆಂದು ಎಫ್'ಬಿಐ ಸಿಯಾಟಲ್ ವಕ್ತಾರ ಐನ್ ಡೀಟ್ರಿಚ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com