ಕರಾಚಿ: ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ 30 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಅಧಿಕಾರಿಗಳು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ಅಂತರಾಷ್ಟ್ರೀಯ ಜಲ ಗಡಿಯ ಸಮೀಪದಲ್ಲಿ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆದ ಸಿಬ್ಬಂದಿಗಳು ಭಾರತೀಯ ಮೀನುಗಾರರನ್ನು ವಶಕ್ಕೆ ಪಡೆದಿದ್ದು, ಮೀನುಗಾರರನ್ನು ಕರಾಚಿ ಬಂದರಿಗೆ ಕರೆದೊಯ್ದಿದ್ದಾರೆಂದು ವರದಿಗಳು ತಿಳಿಸಿವೆ.
ಈ ಕುರಿತಂತೆ ಸ್ವತಃ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆಯ ವಕ್ತಾರ ಮಾಹಿತಿ ನೀಡಿದ್ದು, ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 30 ಭಾರತೀಯ ಮೀನುಗಾರರನ್ನು ಬಂಧನಕ್ಕೊಳಪಡಿಸಲಾಗಿದ್ದು, 5 ದೋಣಿಗಳನ್ನು ವಶಖ್ಕೆ ಪಡೆಯಲಾಗಿದೆ ಎಂದು ತಿಳಇಸಿದ್ದಾರೆ.
ಕಾನೂನು ಪ್ರಕ್ರಿಯೆಗಾಗಿ ಭಾರತೀಯ ಮೀನುಗಾರರರನ್ನು ಡಾಕ್ಸ್ ಪೊಲೀಸರ ವಶಕ್ಕೆ ನೀಡಲಾಗಿದ್ದು, ಅಧಿಕಾರಿಗಳು ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಈ ವರೆಗೂ ಪಾಕಿಸ್ತಾನ ಒಟ್ಟು 304 ಭಾರತೀಯ ಮೀನುಗಾರರನ್ನು ಬಂಧಿಸಿದೆ. ಕಳೆದ ಏಪ್ರಿಲ್ 27 ರಂದು 29 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದ್ದ ಪಾಕಿಸ್ತಾನ ಪಡೆಗಳು 5 ದೋಣಿಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಮಾರ್ಚ್ ತಿಂಗಳಿನಲ್ಲಿಯೂ ಎರಡು ಬಾರಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು.