ಪರಮಾಣು ವಿದ್ಯುತ್‌ ಒಪ್ಪಂದಕ್ಕೆ ಪ್ರಧಾನಿ ಮೋದಿ-ರಷ್ಯಾ ಅಧ್ಯಕ್ಷ ಪುಟಿನ್ ಸಹಿ ಸಾಧ್ಯತೆ

ಆರು ದಿನಗಳ ಯೂರೋಪ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಷ್ಯಾಗೆ ಆಗಮಿಸಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಸ್ಕೋ: ಆರು ದಿನಗಳ ಯೂರೋಪ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಷ್ಯಾಗೆ ಆಗಮಿಸಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.

ಇಂದು ನೆಯಲಿರುವ ವಾರ್ಷಿಕ ಶೃಂಗಸಭೆಯಲ್ಲಿ ಉಭಯ ನಾಯಕರು ಮಹತ್ವದ ಚರ್ಚೆ ನಡೆಸಲಿದ್ದು, ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಈ ಪೈಕಿ ತಮಿಳುನಾಡಿನ ಕೂಡಂಕುಳಂನಲ್ಲಿ ನಿರ್ಮಿಸುತ್ತಿರುವ ಬೃಹತ್‌  ಪರಮಾಣು ವಿದ್ಯುತ್‌ ಸ್ಥಾವರದ ಎರಡು ಘಟಕಗಳಿಗೆ ರಷ್ಯಾ ನೀಡುವ ನೆರವಿನ ಕುರಿತಾದ ಒಪ್ಪಂದ ಮಹತ್ವ ಪಡೆದಿದೆ. ಉಭಯ ದೇಶಗಳ ಅಧಿಕಾರಿಗಳು ಒಪ್ಪಂದದ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದು, ಈ  ಒಪ್ಪಂದಕ್ಕೆ ಸಹಿ ಹಾಕಿದರೆ ಪರಮಾಣು ವಿದ್ಯುತ್‌ ಸ್ಥಾವರದ 5 ಮತ್ತು 6ನೇ ಘಟಕಗಳ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ. ಈ ಘಟಕಗಳು ತಲಾ 1 ಸಾವಿರ ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯ ಹೊಂದಿವೆ.

ಈ ಒಪ್ಪಂದದಿಂದಾಗಿ ದೇಶದ ಪರಮಾಣು ವಿದ್ಯುತ್‌ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಪ್ರಸ್ತುತ ದೇಶದ ಎಲ್ಲ 22 ಪರಮಾಣು ವಿದ್ಯುತ್‌ ಸ್ಥಾವರಗಳಿಂದ 6780 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಇದಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನ, ರೈಲ್ವೆ, ಸಾಂಸ್ಕೃತಿಕ ವಿನಿಮಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖ ಒಪ್ಪಂದಗಳಿದೆ ಉಭಯ ನಾಯಕರು ಸಹಿ ಹಾಕಲಿದ್ದಾರೆ. ಗುರುವಾರ ನಡೆಯುವ ಶೃಂಗಸಭೆಯಲ್ಲಿ  ಉಭಯ ದೇಶಗಳ ನಾಯಕರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಲಿದ್ದು, ಪ್ರಮುಖವಾಗಿ ಭಾರತದ ಎನ್ಎಸ್ ಜಿ ಸದಸ್ಯತ್ವ ಕುರಿತು ಪ್ರಧಾನಿ ನರೇಂದ್ರ ಮೋದಿ ಪುಟಿನ್ ರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ. ಇತ್ತೀಚಿನ  ದಿನಗಳಲ್ಲಿ ಚೀನಾದೊಂದಿಗೆ ರಷ್ಟಾ ಉತ್ತಮ ಬಾಂಧವ್ಯ ಹೊಂದಿದ್ದು, ಎನ್ ಎಸ್ ಜಿ ಸದಸ್ಯತ್ವ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಮನವೊಲಿಸುವಂತೆ ರಷ್ಯಾ ಮೇಲೆ ಭಾರತ ಒತ್ತಡ ಹಾಕುವ ಸಾಧ್ಯತೆ ಇದೆ.

ಇನ್ನು 2014ರಲ್ಲಿ ಉಭಯ ದೇಶಗಳ ನಡುವೆ 10 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಏರ್ಪಟ್ಟಿತ್ತು. ಆದರೆ ಇದೀಗ ಆ ಪ್ರಮಾಣ 7.8 ಬಿಲಿಯನ್ ಡಾಲರ್ ಗೆ ಕುಸಿದಿದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ  ಪ್ರಮಾಣವನ್ನು 30 ಬಿಲಿಯನ್ ಡಾಲರ್ ಗೆ ಏರಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಪಂಕಜ್‌ ಶರಣ್‌ ಅವರು ಹೇಳಿದ್ದಾರೆ. ಇನ್ನು ವಾರ್ಷಿಕ ಶೃಂಗಸಭೆಯಲ್ಲಿ ಭಾರತದ 60 ಕಂಪೆನಿಗಳ  ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒ) ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com